
Sidlaghatta : “ಮುಂಬರುವ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಾದ್ಯಂತ ಶೇಕಡಾ ನೂರರಷ್ಟು ಫಲಿತಾಂಶ ಸಾಧಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ,” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಕರ ಸಮಾಲೋಚನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರೀಕ್ಷೆಗೆ ಇನ್ನು ಕೇವಲ ಎರಡೂವರೆ ತಿಂಗಳು ಬಾಕಿ ಉಳಿದಿದ್ದು, ಈ ಅವಧಿಯಲ್ಲಿ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಿರಂತರ ಶ್ರಮಿಸಬೇಕು. ವಿಶೇಷವಾಗಿ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವಿಶೇಷ ‘ಪಾಸಿಂಗ್ ಪ್ಯಾಕೇಜ್’ಗಳ ಮೂಲಕ ತರಬೇತಿ ನೀಡಿ ಉತ್ತೀರ್ಣರಾಗುವಂತೆ ಮಾಡಬೇಕು ಎಂದು ಅವರು ಸೂಚಿಸಿದರು. ಇದೇ ವೇಳೆ ಶಿಕ್ಷಕರು ಆನ್‌ಲೈನ್ ಹಾಜರಾತಿ ಮತ್ತು ಮೌಲ್ಯಾಂಕನ ಶ್ರೇಣಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಮಾತನಾಡಿ, ಶಾಸಕ ಬಿ.ಎನ್.ರವಿಕುಮಾರ್ ಅವರು ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಫಲಿತಾಂಶ ತಂದ ಶಿಕ್ಷಕರಿಗೆ ಪ್ರೋತ್ಸಾಹಧನ ಘೋಷಿಸಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿ ನೂರಕ್ಕೆ ನೂರು ಫಲಿತಾಂಶ ಪಡೆಯಲು ಶಿಕ್ಷಕರು ಪಣತೊಡಬೇಕು ಎಂದರು. ಇದೇ ವೇಳೆ ಶಿಕ್ಷಕರ ಸೇವಾ ವಿಷಯಗಳ ಬಗ್ಗೆ ಮಾತನಾಡಿದ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಇ-ಸೇವಾ ಪುಸ್ತಕ ನಿರ್ವಹಣೆ ಕುರಿತು ಮುಖ್ಯಶಿಕ್ಷಕರಿಗೆ ಶೀಘ್ರವೇ ಕಾರ್ಯಾಗಾರ ನಡೆಸಲಾಗುವುದು ಹಾಗೂ ಸ್ಯಾಲರಿ ಪ್ಯಾಕೇಜ್ ಮತ್ತು ವಿಮಾ ಸೌಲಭ್ಯಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕ ಆಂಜನೇಯ, ನಿವೃತ್ತ ಮುಖ್ಯಶಿಕ್ಷಕ ಬೈರಾರೆಡ್ಡಿ, ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಜಿಲ್ಲಾ ಖಜಾಂಚಿ ಎಂ.ಶಿವಕುಮಾರ್ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಸ್ಥರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.