ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಜನಸಮುದಾಯ ಅಧಿಕಾರಿಗಳೊಂದಿಗೆ ಸಹಕರಿಸಿದಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಸಹಕರಿಸಲು ಆಯೋಜಿಸಿದ್ದ ಸರ್ವಧರ್ಮಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17 ಕ್ಕೆ ಏರಿದೆ. ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಗಲಿರುಳೂ ಕೊರೊನಾ ತಡೆಗಟ್ಟಲು ಶ್ರಮಿಸುತ್ತಿರುವರು. ನಾಗರಿಕರ ಸಹಭಾಗಿಕತ್ವದ ಅಗತ್ಯವಿದೆ.
ಮಸೀದಿ, ಚರ್ಚ್ ಮತ್ತು ದೇವಾಲಯಗಳಿಗೆ ಹಿರಿಯರು ಮತ್ತು ಮಕ್ಕಳು ಕಡ್ಡಾಯವಾಗಿ ಬರಬಾರದೆಂದು ತಿಳಿಸಿ. ಕೊರೊನಾ ವೈರಸ್ ಬಂದ ನಂತರ ಕಷ್ಟಪಡುವುದಕ್ಕಿಂತ ಬರದಂತೆ ನೋಡಿಕೊಳ್ಳೋಣ. ಅಂತರವನ್ನು ಕಾಯ್ದುಕೊಳ್ಳಿ, ಶುಚಿತ್ವಕ್ಕೆ ಪ್ರಾಧಾನ್ಯತೆ ಕೊಡಿ. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕೆಂದು ತಿಳಿಸಿ. ಆದಷ್ಟು ಜನರು ಮನೆಗಳಲ್ಲಿಯೇ ಇರುವಂತೆ ಹೇಳಿ. ಸ್ಯಾನಿಟೈಜರ್ ಬಳಕೆ ವ್ಯಾಪಕವಾಗಲಿ ಎಂದು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಇಓ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ತಹಶೀಲ್ದಾರ್ ಅರುಂಧತಿ ಹಾಗೂ ಸರ್ವಧರ್ಮಗಳ ಮುಖಂಡರು ಉಪಸ್ಥಿತರಿದ್ದರು.
ವರ್ತಕರು, ಹೋಟೆಲ್ ಮತ್ತು ರಸ್ತೆ ಬದಿ ಮಾರಾಟಗಾರರ ಸಭೆ : ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಕೆ.ಅರುಂಧತಿ ಮತ್ತು ನೋಡಲ್ ಅಧಿಕಾರಿ ಶಿವಕುಮಾರ್ ಅವರು ನಗರದ ವರ್ತಕರು, ಹೋಟೆಲ್ ಮತ್ತು ರಸ್ತೆ ಬದಿ ಮಾರಾಟಗಾರರ ಸಂಘದ ಮುಖಂಡರ ಸಭೆ ಕರೆದು ಅವರಿಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಸೂಚಿಸಿದರು. ಗ್ರಾಹಕರು ಮಾಸ್ಕ್ ಧರಿಸಿರಬೇಕು, ಅಂತರವನ್ನು ಕಾಯ್ದುಕೊಳ್ಳಬೇಕು. ತಪ್ಪಿದ್ದಲ್ಲಿ ಅಂಗಡಿ, ಹೋಟೆಲ್ ಮಾಲೀಕರಿಗೆ ದಂಡ ವಿಧಿಸಲಾಗುವುದು ಮತ್ತು ಪೊಲೀಸರು ದೂರು ದಾಖಲಿಸುವರು ಎಂದು ಎಚ್ಚರಿಕೆ ನೀಡಿದರು. ಹೋಟೆಲುಗಳಲ್ಲಿ ಬಳಸಿ ಬಿಸಾಡುವ ತಟ್ಟೆ, ಲೋಟ, ಚಮಚಗಳನ್ನು ಬಳಸಬೇಕು. ತಿಂಡಿ ಬಡಿಸುವವರು ಮಾಸ್ಕ್ ಧರಿಸಿರಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿಗಳ ಪರಿಶೀಲನೆ : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ತಾಲ್ಲೂಕು ಕೇಂದ್ರದಲ್ಲಿ ಕೋವಿಡ್ ವಾರ್ಡ್ ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಮಸೀದಿ, ದೇವಾಲಯ ಮತ್ತು ಚರ್ಚ್ ಗೆ ಭೇಟಿ ನೀಡಿ, ಹೆಚ್ಚು ಜನರು ಸೇರದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಆಟೋ ಮೂಲಕ ಪ್ರಚಾರವನ್ನು ನಡೆಸಲಾಯಿತು. ಸೋಮವಾರದಿಂದ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಯಿತು.