
Sidlaghatta : ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ನ್ನು ನಡೆಸಲಿದ್ದು ಅದಕ್ಕೆ ಅಗತ್ಯವಾದ ಎಲ್ಲ ರೀತಿಯ ತಯಾರಿ ನಡೆದಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಹಾಗೂ ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್ ತಿಳಿಸಿದರು.
ನಗರದ ತಹಶೀಲ್ದಾರರ ಕಚೇರಿಯಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ನೋಂದಣಾಧಿಕಾರಿ ಎನ್.ಗಗನಸಿಂಧು ಹಾಗೂ ನಗರದ ಸಹಾಯಕ ನೋಂದಣಾಧಿಕಾರಿ ಜಿ.ಅಮೃತ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎಸ್.ಐ.ಆರ್ ಕುರಿತು ವಿವರಿಸಿದರು.
ಜೂನ್ 20ರಿಂದ 29ರವರೆಗೂ 10 ದಿನಗಳ ಕಾಲ ಮತಗಟ್ಟೆವಾರು ನೇಮಿಸಿದ ಮತಗಟ್ಟೆ ಅಧಿಕಾರಿ(BLO) ಹಾಗೂ ಮತಗಟ್ಟೆ ಮೇಲ್ವಿಚಾರಕ ಅಧಿಕಾರಿಗಳು ಸೇರಿದಂತೆ ಎಸ್.ಐ.ಆರ್ ಗೆ ಕಾರ್ಯದಲ್ಲಿ ನೇಮಕಗೊಂಡ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗುವುದು.
ಗಣತಿ ನಮೂನೆಗಳನ್ನು ಬಿ.ಎಲ್.ಓ ಗಳಿಗೆ ವಿತರಿಸುವುದು ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ಪ್ರತಿ ಮತಗಟ್ಟೆಗೂ ನೇಮಕಗೊಂಡ ಬಿ.ಎಲ್.ಎಗಳಿಗೆ ತರಬೇತಿ ನೀಡುವುದರೊಂದಿಗೆ ಎಸ್.ಐ.ಆರ್ ಕಾರ್ಯಕ್ಕೆ ಸಹಕಾರ ನೀಡಲು ರಾಜಕೀಯ ಪಕ್ಷಗಳಿಂದ ನೇಮಕಗೊಂಡ ಬಿ.ಎಲ್.ಎ ಮತ್ತು ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೆ ಮನವಿ ಮಾಡಲಾಗುವುದು ಎಂದರು.
ಜೂನ್ 30ರಿಂದ ಜುಲೈ 29ರವರೆಗೂ ಒಂದು ತಿಂಗಳ ಕಾಲ ಎಲ್ಲ ಬಿ.ಎಲ್.ಓ ಗಳು ಮನೆ ಮನೆಗೂ ಭೇಟಿ ನೀಡಿ ಮತದಾರರ ಪರಿಷ್ಕರಣೆಯ ನಮೂನೆಗಳನ್ನು ವಿತರಿಸಿ ಅಗತ್ಯ ಮಾಹಿತಿಯೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಿಸಿಕೊಳ್ಳುವುದು.
ಜತೆಗೆ 1200ಕ್ಕೂ ಹೆಚ್ಚು ಮತದಾರರು ಇರುವ ಮತಗಟ್ಟೆಗಳನ್ನು ಗುರ್ತಿಸುವ ಕಾರ್ಯವೂ ಜತೆ ಜತೆಗೆ ನಡೆಯಲಿದೆ ಎಂದು ವಿವರಿಸಿದರು.
ಅಂತಿಮವಾಗಿ ಆಗಷ್ಟ್ 5ರಂದು ಅಂತಿಮ ಕರಡು ಮತದಾರರ ಪಟ್ಟಿಯನ್ನು ಎಲ್ಲ ಮತಗಟ್ಟೆಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ.
ಕರಡು ಮತದಾರರ ಪಟ್ಟಿ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 5ರಿಂದ ಸೆಪ್ಟಂಬರ್ 4ರವರೆಗೂ ಒಂದು ತಿಂಗಳು ಕಾಲಾವಕಾಶ ಇರಲಿದೆ. ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಅಕ್ಟೋಬರ್ 3 ರೊಳಗೆ ಇತ್ಯರ್ಥಪಡಿಸಬೇಕಾಗುತ್ತದೆ ಎಂದು ತಿಳಿಸಿದರು.
ಅಂತಿಮವಾಗಿ ಅಕ್ಟೋಬರ್ 7ರಂದು ಅಂತಿಮಗೊಂಡ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ವಿವರಿಸಿದರು.