
Sidlaghatta : ಮುಂಬರುವ ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ NDA ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುರೇಶ್ ಅವರ ಪರವಾಗಿ ಚುನಾವಣಾ ಪ್ರಚಾರದ ರೂಪುರೇಷೆ ಸಿದ್ಧಪಡಿಸಲು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಜಿಲ್ಲಾ ಮಟ್ಟದ ಸಭೆಯನ್ನು ಸೆ.30ರಂದು ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಬಿಜೆಪಿ ಸೇವಾಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ನಡೆಸುವ ಕುರಿತು ಎರಡೂ ಪಕ್ಷಗಳ ಮುಖಂಡರಿಗೆ ಅಗತ್ಯ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಹಾಗೂ ಕಾರ್ಯಕರ್ತರನ್ನು ಒಳಗೊಂಡ ಸಭೆ ಆಯೋಜಿಸಲಾಗಿದೆ” ಎಂದರು.
ಸೆ.30ರಂದು ಬೆಳಿಗ್ಗೆ 10.30ಕ್ಕೆ ಹರ್ಷೋದಯ ಕನ್ವೆನ್ಷನ್ ಸೆಂಟರ್ ನಲ್ಲಿ ಸಭೆ ನಡೆಯಲಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಮುಂಬರುವ ಚುನಾವಣೆಯಲ್ಲಿ NDA ಅಭ್ಯರ್ಥಿಯಾಗಿ ಸುರೇಶ್ ಅವರು ಕಣದಲ್ಲಿದ್ದು, ದಾವಣಗೆರೆ ಮೂಲದ ಅವರು ಕಳೆದ 25 ವರ್ಷಗಳಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಾಮಚಂದ್ರಗೌಡ ಹೇಳಿದರು.
ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿ ಎಷ್ಟು?
ಆಗ್ನೇಯ ಪದವೀಧರರ ಕ್ಷೇತ್ರವು ಕೋಲಾರ ಜಿಲ್ಲೆಯ ಮುಳಬಾಗಿಲು ಗಡಿಯಿಂದ ಚಿತ್ರದುರ್ಗದವರೆಗೆ ವ್ಯಾಪಿಸಿದ್ದು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳನ್ನು ಒಳಗೊಂಡಿದೆ. ಸುಮಾರು 500 ಕಿ.ಮೀ ವ್ಯಾಪ್ತಿಯ ಈ ಕ್ಷೇತ್ರದಲ್ಲಿ ಎರಡು ಲಕ್ಷದವರೆಗೆ ಮತದಾರರಿದ್ದು, ಈ ಹಿಂದೆ ಒಂದು ಲಕ್ಷಕ್ಕಿಂತ ಕಡಿಮೆ ಮತದಾರರಿದ್ದರು ಎಂದು ಅವರು ತಿಳಿಸಿದರು.
“ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಲವು ಬಾರಿ ಗೆಲುವು ಸಾಧಿಸಿವೆ. ಈ ಬಾರಿ ಎರಡೂ ಪಕ್ಷಗಳು ಒಗ್ಗೂಡಿ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಹೀಗಾಗಿ NDA ಅಭ್ಯರ್ಥಿಯ ಪರವಾಗಿ ಜಿಲ್ಲೆಯಾದ್ಯಂತ ಸಂಘಟಿತವಾಗಿ ಚುನಾವಣಾ ಕಾರ್ಯ ನಡೆಸಲು ಸಭೆಯಲ್ಲಿ ಚರ್ಚಿಸಲಾಗುವುದು” ಎಂದರು.
NDA ಅಭ್ಯರ್ಥಿಯ ಪರವಾಗಿ ನಡೆಯಲಿರುವ ಜಿಲ್ಲಾ ಮಟ್ಟದ ಸಭೆಗೆ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಸೇವಾ ಸಂಕಲ್ಪ ಅಭಿಯಾನ ಏನು?
ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಬದುಕಿನ 25 ವರ್ಷಗಳ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ದೇಶದಾದ್ಯಂತ ಒಂದು ತಿಂಗಳ ಕಾಲ “ಸೇವಾ ಸಂಕಲ್ಪ ಅಭಿಯಾನ” ಹಮ್ಮಿಕೊಳ್ಳಲಾಗಿದೆ. ಸೆ.17ರಿಂದ ಅ.17ರವರೆಗೆ ನಡೆಯಲಿರುವ ಅಭಿಯಾನದಡಿ ವಿವಿಧ ಸೇವಾ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜನರನ್ನು ಸೇವಾ ಚಟುವಟಿಕೆಗಳಲ್ಲಿ ತೊಡಗಿಸುವುದು ಹಾಗೂ ದೇಶದ ಅಭಿವೃದ್ಧಿಯ ಕುರಿತ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ ಗೌಡ, ನಗರ ಮಂಡಲ ಅಧ್ಯಕ್ಷ ದೇವರಾಜ್, ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಕನಕಪ್ರಸಾದ್ ಹಾಜರಿದ್ದರು.
ಇದೇ ಚುನಾವಣೆಯ ಹಿಂದಿನ ಪ್ರಚಾರದ ಕುರಿತು ಆಗ್ನೇಯ ಪದವೀಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಪ್ರಚಾರ ಚುರುಕು ವರದಿಯನ್ನು, ಮತದಾನದ ಜವಾಬ್ದಾರಿ ಕುರಿತು ಮತದಾನ ಕೇವಲ ಹಕ್ಕಲ್ಲ, ಜವಾಬ್ದಾರಿಯೂ ಹೌದು: ಜಿ.ಪಂ ಸಿಇಒ ವರದಿಯನ್ನೂ ಓದಿ.
In English: BJP district president Seekal Ramachandra Gowda said a district-level meeting of BJP and JD(S) leaders, office-bearers and workers will be held at 10.30 am on September 30 at Harshodaya Convention Centre to plan the campaign for Suresh, the NDA (National Democratic Alliance) candidate in the upcoming South-East Graduates’ constituency election to the Legislative Council. Speaking at a press conference at the BJP Seva Soudha in Sidlaghatta on Tuesday, he said BJP state president B.Y. Vijayendra and JD(S) state president H.D. Kumaraswamy have instructed both parties to work together. The constituency spans about 500 km from the Mulbagal border in Kolar to Chitradurga, covering Chitradurga, Davanagere, Tumakuru, Chikkaballapur and Kolar districts, and now has up to two lakh voters, compared with fewer than one lakh earlier. He also said the BJP is running a month-long ‘Seva Sankalpa Abhiyana’ from September 17 to October 17 to mark 25 years of Prime Minister Narendra Modi’s public life.