ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ, ವಿದ್ಯಾಗಮ ಯೋಜನೆಯ ಅನುಷ್ಟಾನದ ಪ್ರಗತಿಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ.ನಾಗೇಶ್ ಮಾತನಾಡಿದರು.
ಭೌಗೋಳಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯು ಬಯಲುಸೀಮೆ ಪ್ರದೇಶವಾದರೂ ಇಲ್ಲಿನ ಮಣ್ಣಿಗೆ ಧೀಶಕ್ತಿಯ ಗುಣವಿದೆ. ಇಲ್ಲಿನ ರೈತರು ಶ್ರಮಜೀವಿಗಳು, ಮಿಲ್ಕ್ ಮತ್ತು ಸಿಲ್ಕ್ ಗೆ ಜಾಗತಿಕಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ಜಿಲ್ಲೆಯ ಸರ್.ಎಂ.ವಿಶ್ವೇಶ್ವರಯ್ಯರಂತಹ ಧೀಮಂತರನ್ನು ನೀಡಿದೆ ಎಂದು ಅವರು ತಿಳಿಸಿದರು.
ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯಕ್ಕೇ ಪ್ರಥಮಸ್ಥಾನದಲ್ಲಿದ್ದು ಒಂದು ಮೈಲಿಗಲ್ಲು ಸ್ಥಾಪಿಸಿದೆ. ಪ್ರತಿವರ್ಷದಂತೆ ಕೇವಲ ಒಟ್ಟಾರೆ ಫಲಿತಾಂಶದ ಆಧಾರದ ಮೇಲೆ ರಾಜ್ಯಮಟ್ಟದ ಗ್ರೇಡ್ ನೀಡಿಲ್ಲ. ವಿದ್ಯಾರ್ಥಿಗಳ ಎಲ್ಲಾ ಶ್ರೇಣಿಯ ಫಲಿತಾಂಶದ ಸರಾಸರಿ ಪಡೆದು ಪ್ರಥಮಸ್ಥಾನ ನೀಡಿರುವುದರಿಂದ ಶಿಕ್ಷಕರ, ಅಧಿಕಾರಿಗಳ, ಜನಪ್ರತಿನಿಧಿಗಳ ಪ್ರಾಮಾಣಿಕ ಪ್ರಯತ್ನದ ಫಲವಾಗಿದೆ ಎಂದರು.
ಕೊರೋನಾ ಸಂಕಷ್ಟದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಒಂದು ಸವಾಲಾಗಿತ್ತು. ಆ ವೇಳೆ ಇಲಾಖೆಯು ಕೈಗೊಂಡ ರಕ್ಷಣಾ ಕಾರ್ಯಾಚರಣಾ ತಂತ್ರಗಳು ಉತ್ತಮವಾಗಿ ಅನುಷ್ಟಾನಗೊಂಡವು. ಅಂತಿಮವಾಗಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ಜಿಲ್ಲಾಡಳಿತದ ಸಹಕಾರದಲ್ಲಿ ಪ್ರತಿವಿದ್ಯಾರ್ಥಿಗಳ ದೂರವಾಣಿ ಸಂಖ್ಯೆ ಸಂಗ್ರಹಿಸಿ ಪ್ರತಿಶಾಲೆಯ ಶಿಕ್ಷಕರೂ ಮನೆಮನೆಗೆ ತೆರಳಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಿದ್ದಕ್ಕೆ ಫಲ ಸಿಕ್ಕಿದೆ. ಇದೇ ರೀತಿಯ ಫಲಿತಾಂಶವನ್ನು ಮುಂದಿನ ವರ್ಷಗಳಲ್ಲಿಯೂ ಉಳಿಸಿಕೊಳ್ಳಲಾಗುವುದು ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಶಾಲಾ ಭೋಧನೆಗೆ ಅಡ್ಡಿಯಾಗಿರುವುದರಿಂದ ಆನ್‌ಲೈನ್, ಆಫ್‌ಲೈನ್ ಅಥವಾ ಮತ್ತಿತರ ಮಾರ್ಗಗಳನ್ನು ಅನುಸರಿಸಿ ಕಲಿಕೆಯಲ್ಲಿ ಉಂಟಾಗಬಹುದಾದ ತಡೆಯನ್ನು ಹೋಗಲಾಡಿಸಬೇಕಿದೆ. ಪ್ರತಿ ತರಗತಿಯ ಮಕ್ಕಳ ಕಲಿಕೆಯಲ್ಲಿನ ಅಂತರವನ್ನು ಕ್ಷೀಣಿಸಲು ವಿದ್ಯಾಗಮ ನಿರಂತರ ಕಲಿಕಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಬೇಕಿದೆ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ಶಾಲಾವಾರು ವಿಶ್ಲೇಷಣೆ, ವಿದ್ಯಾಗಮ ಯೋಜನೆಯ ಪ್ರಗತಿ ಕುರಿತು ಪರಿಶೀಲನೆ ನಡೆಯಿತು. ಉಪನಿರ್ದೇಶಕ ಎಸ್.ಜಿ.ನಾಗೇಶ್, ಬಿಇಒ ಆರ್.ಶ್ರೀನಿವಾಸ್, ಅಕ್ಷರದಾಸೋಹ ಸಹಾಯಕನಿರ್ದೇಶಕ ಆಂಜನೇಯ, ಇಒ ಶಿವಲಿಂಗಯ್ಯ, ಶಿಕ್ಷಣಸಂಯೋಜಕ ಭಾಸ್ಕರಗೌಡ, ವಿಷಯಪರಿವೀಕ್ಷಕಿ ಕೃಷ್ಣಕುಮಾರಿ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ವಿಷಯಪರಿವೀಕ್ಷಕಿ ಕೃಷ್ಣಕುಮಾರಿ, ಶಿಕ್ಷಕರಾದ ಬೈರಾರೆಡ್ಡಿ, ಎಲ್.ವೆಂಕಟರೆಡ್ಡಿ, ಎಚ್.ಎಸ್.ರುದ್ರೇಶಮೂರ್ತಿ, ಗೋಪಿನಾಥ್, ಡಿ.ಸಿ.ಗೋಪಿನಾಥ್, ಶಿಕ್ಷಣಸಂಯೋಜಕ ಭಾಸ್ಕರಗೌಡ, ಕೆಂಪಣ್ಣ, ಸಿದ್ಧರಾಜು, ಸತ್ಯನಾರಾಯಣ್ ಹಾಜರಿದ್ದರು.