Home News ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳ ವಿತರಣೆ

ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳ ವಿತರಣೆ

0

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ವಾಮಿ ವಿವೇಕಾನಂದ ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಪಠ್ಯಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಂಗಮಕೋಟೆ ಸಿಆರ್‌ಪಿ ಎಂ.ರಮೇಶ್‌ಕುಮಾರ್ ಮಾತನಾಡಿದರು.

 ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಅನೇಕ ಸೌಲಭ್ಯ, ಯೋಜನೆಗಳನ್ನು ಸರ್ಕಾರ, ಇಲಾಖೆಯು ಅನುಷ್ಟಾನಗೊಳಿಸಿದೆ. ಶೈಕ್ಷಣಿಕಾಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವದ ಅಗತ್ಯವೂ ಇದೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವಲ್ಲಿ ಸಮುದಾಯವು ಇಲಾಖೆಯೊಂದಿಗೆ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು.

 ಇಡೀ ಸಮುದಾಯವು ಸರ್ಕಾರಿ ಶಾಲೆಗಳಲ್ಲಿ ನಡೆಯುವ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಪ್ರೋತ್ಸಾಹಿಸಬೇಕು. ಬಡ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ, ಶೈಕ್ಷಣಿಕ ಸಹಕಾರವನ್ನು ಒದಗಿಸಬೇಕು. ಶಾಲೆಯಲ್ಲಿ ಕಲಿತ ಮಕ್ಕಳು ಇಂದಿನ ಪೀಳಿಗೆಗೆ ಸಹಾಯಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

 ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ನಡೆಯುತ್ತಿಲ್ಲ. ಈಗಾಗಲೇ ವಾಟ್ಸಾಪ್ ಗ್ರೂಪ್‌ಗಳ ಮೂಲಕ, ಆನ್‌ಲೈನ್, ದೂರದರ್ಶನಪಾಠ, ವೀಡಿಯೋಗಳ ಹಂಚಿಕೆ ಮೂಲಕ ಕಲಿಕೆಗೆ ಮಕ್ಕಳನ್ನು ಪ್ರೋತ್ಸಾಹಿಸಲಾಗಿದೆ. ವಿದ್ಯಾಗಮ ಯೋಜನೆಯಡಿ ವಠಾರಶಾಲೆಗಳ ರೂಪದಲ್ಲಿ ಮುಂದಿನ ಸೋಮವಾರದಿಂದ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಪಾಠಕಲಿಕೆ, ಕೌಶಲಗಳ ಬೆಳವಣಿಗೆಗೆ ಯೋಜನೆ ರೂಪಿಸಲಾಗಿದೆ. ಔಪಚಾರಿಕ ಶಿಕ್ಷಣ ತರಗತಿಗಳು ಆರಂಭವಾಗುವವರೆಗೂ ಇನ್ಮುಂದೆ ನಿರಂತರವಾಗಿ ಗ್ರಾಮದ ಆಯ್ದ ಸ್ಥಳಗಳಲ್ಲಿ ಕೊರೋನಾ ನಿಯಮಗಳ ಪಾಲನೆಯೊಂದಿಗೆ ಕಲಿಕೆಗೆ ಮಕ್ಕಳನ್ನು ಪ್ರೇರೇಪಿಸಲಾಗುತ್ತಿದೆ ಎಂದರು.

 ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ದಿನಚರಿಗಳನ್ನು ವಿತರಿಸಿ ಕಲಿಕೆಗೆ ಪೂರಕವಾಗಿ ಮಾರ್ಗದರ್ಶನ ನೀಡಲಾಯಿತು.

 ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಮಾಜಿ ಸದಸ್ಯ ಬಚ್ಚೇಗೌಡ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!