Home News ವಾಸವಿ ರಸ್ತೆ ಕಾಮಗಾರಿ ನಾಳೆಯಿಂದ ಪುನರಾರಂಭ : ಶಾಸಕ ಭರವಸೆ

ವಾಸವಿ ರಸ್ತೆ ಕಾಮಗಾರಿ ನಾಳೆಯಿಂದ ಪುನರಾರಂಭ : ಶಾಸಕ ಭರವಸೆ

0
Sidlaghatta Vasavi Road Repair Work MLA Inspection

Sidlaghatta : ಶಿಡ್ಲಘಟ್ಟದ ವಾಸವಿ ರಸ್ತೆಯಲ್ಲಿ ಹಲವು ದಿನಗಳಿಂದ ಕಾಮಗಾರಿ ನಡೆಸದೆ ನೆನೆಗುದಿಗೆ ಬಿದ್ದಿದ್ದ ಕಾರಣ ವ್ಯಾಪಾರ ವಹಿವಾಟು ಹಾಗೂ ದಿನನಿತ್ಯದ ಬದುಕಿಗೆ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದ ಹಿನ್ನೆಲೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ವಾಸವಿ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರಸಭೆ ಪೌರಾಯುಕ್ತೆ ಜಿ.ಅಮೃತ ಹಾಗೂ ಇತರೆ ಅಧಿಕಾರಿಗಳೊಂದಿಗೆ ವಾಸವಿ ರಸ್ತೆಗೆ ಭೇಟಿ ನೀಡಿದ ಶಾಸಕರ ಬಳಿ ಅಲ್ಲಿನ ವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ರಸ್ತೆ ಅಭಿವೃದ್ಧಿಗೆಂದು ಇದ್ದ ರಸ್ತೆಯನ್ನು ಕಿತ್ತು ಹಾಕಿ ತಿಂಗಳುಗಳೇ ಕಳೆದಿವೆ.

ಕುಡಿಯುವ ನೀರಿನ ಪೈಪ್‌ಲೈನ್, ಚರಂಡಿ ಎಲ್ಲವನ್ನೂ ಕಿತ್ತು ಹಾಕಿದ ಕಾರಣ ಸಾರ್ವಜನಿಕರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಜಲ ಜೀವನ್ ಮಿಷನ್‌ನ ನೀರಿನ ಪೈಪು ಹಾಗೂ ಒಳಚರಂಡಿ ಪೈಪ್ ಅಳವಡಿಕೆ ಬಿಟ್ಟರೆ ಉಳಿದ ಕೆಲಸ ನಡೆಯದೆ ನೆನೆಗುದಿಗೆ ಬಿದ್ದಿತ್ತು.

ಇದರಿಂದ ಈ ರಸ್ತೆಯಲ್ಲಿನ ಎಲ್ಲ ಅಂಗಡಿಗಳು ತಿಂಗಳುಗಳಿಂದ ಬಾಗಿಲು ಹಾಕಿದ್ದವು. ಬಾಗಿಲು ತೆಗೆದರೂ ವ್ಯಾಪಾರಕ್ಕೆ ಯಾರೂ ಬರುತ್ತಿಲ್ಲ. ಮನೆ-ಅಂಗಡಿಗಳ ತ್ಯಾಜ್ಯ ನೀರು ಬೀದಿಗೆ ಹರಿದು ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ದೂರಿದರು.

ನಾಗರಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕ ಬಿ.ಎನ್.ರವಿಕುಮಾರ್ ಅವರು, ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ ಒಳಚರಂಡಿ ಹಾಗೂ ಜಲ ಜೀವನ್ ಮಿಷನ್‌ನ ಕುಡಿಯುವ ನೀರಿನ ಯೋಜನೆಯನ್ನೂ ಏಕಕಾಲಕ್ಕೆ ಪೂರ್ಣಗೊಳಿಸಬೇಕಿದೆ ಎಂದು ತಿಳಿಸಿದರು.

ತಾಂತ್ರಿಕ ಸಮಸ್ಯೆಯ ಕಾರಣ ಕಾಮಗಾರಿ ವಿಳಂಬವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ನಾಳೆಯಿಂದಲೇ ಕಾಮಗಾರಿ ಆರಂಭಿಸಿ ಶೀಘ್ರ ಮುಗಿಸುವಂತೆ ಸೂಚಿಸಲಾಗಿದೆ ಎಂದು ಶಾಸಕರು ಸ್ಥಳೀಯರಿಗೆ ಭರವಸೆ ನೀಡಿದರು.

In English: Sidlaghatta MLA B.N. Ravikumar inspected the stalled Vasavi Road repair works following complaints from residents and traders that the halted project — which had torn up the road for drinking water pipeline and drainage work under Jal Jeevan Mission — was disrupting business and daily life for months. The MLA assured that work would resume from tomorrow and be completed on priority, alongside the pending drainage and water supply components.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version