Home News ಸಾರ್ವಜನಿಕ ಆಸ್ಪತ್ರೆಯ ವತಿಯಿಂದ "ವಿಶ್ವ ಸೊಳ್ಳೆ ದಿನ” ಆಚರಣೆ

ಸಾರ್ವಜನಿಕ ಆಸ್ಪತ್ರೆಯ ವತಿಯಿಂದ "ವಿಶ್ವ ಸೊಳ್ಳೆ ದಿನ” ಆಚರಣೆ

0

“ವಿಶ್ವ ಸೊಳ್ಳೆ ದಿನ” ದ ಅಂಗವಾಗಿ ಮಂಗಳವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಜೈವಿಕ ವಿಧಾನವನ್ನು ನಾವೀಗ ಹೆಚ್ಚು ಅಳವಡಿಸಿಕೊಂಡು ಸೊಳ್ಳೆಯನ್ನು ನಿಯಂತ್ರಿಸಬೇಕಿದೆ. ಸೊಳ್ಳೆಗಳಿಂದ ಹರಡುವ ಡೆಂಗ್ಯು, ಚಿಕುಂಗುನ್ಯಾ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸೊಳ್ಳೆಗಳ ಲಾರ್ವ ತಿನ್ನುವ ಗಪ್ಪಿ ಮತ್ತು ಗಂಬೂಸಿಯಾ ಮೀನುಗಳನ್ನು ಸಮಸ್ಯಾತ್ಮಕ ಗ್ರಾಮಗಳಲ್ಲಿ ವಿತರಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.
ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡುವ ಮಹಾಮಾರಿ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಆ. 20ರ ದಿನವನ್ನು ಸೊಳ್ಳೆ ದಿನವಾಗಿ ಆಚರಿಸಲಾಗುತ್ತದೆ. ಮಲೇರಿಯಾ, ಹಳದಿ ಜ್ವರ, ಡೆಂಘಿ, ಎನ್ಸಾಫಲಿಟಿಸ್‌ (ಮೆದುಳಿನ ಉರಿಯೂತ), ಆನೆ ಕಾಲು ರೋಗ ಸೇರಿದಂತೆ ನೂರಕ್ಕೂ ಹೆಚ್ಚು ಮಾರಕ ರೋಗಗಳನ್ನು ಈ ಹೆಣ್ಣು ಸೊಳ್ಳೆಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಸಾವಿಗೆ ಕಾರಣವಾಗುತ್ತವೆ. ಡೆಂಗ್ಯೂ ನಿಯಂತ್ರಣ ಹಾಗೂ ಜಾಗೃತಿ ಮನೆ ಮಾತಾಗಬೇಕು. ಸಾರ್ವಜನಿಕರು ಅನೈರ್ಮಲ್ಯ ಕುರಿತು ಬೇರೆಯವರನ್ನು ದೂರುವ ಮೊದಲು, ತಮ್ಮ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರ ನೈರ್ಮಲ್ಯ ಕಾಪಾಡಲು ಮುಂದಾಗುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ವೈದ್ಯಾಧಿಕಾರಿ ಡಾ.ವಾಣಿ ಮಾತನಾಡಿ, ನೀರು ಅಮೂಲ್ಯವಾದದ್ದು. ನೀರನ್ನು ಸಂಗ್ರಹಿಸುವಾಗ ಸಂಗ್ರಹಗಾರಗಳು, ತೊಟ್ಟಿಗಳನ್ನು ಚೆನ್ನಾಗಿ ತೊಳೆದು ನೀರು ಸಂಗ್ರಹಿಸಿಡಬೇಕು. ಸೊಳ್ಳೆಗಳು ಮರಿ ಮಾಡದಂತೆ ಸಂಗ್ರಹಗಾರಗಳನ್ನು ಮುಚ್ಚಬೇಕು. ಕಾಯಿಲೆ ಬಂದ ನಂತರ ಒದ್ದಾಡುವ ಬದಲು, ರೋಗವೇ ಬಾರದಹಾಗೆ ಮುನ್ನೆಚ್ಚರಿಕೆ ವಹಿಸಿ. ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ಪ್ರತೀ ದಿನವೂ ನಡೆಯುತ್ತಿದೆ. ಮನೆಗಳಲ್ಲಿ ಲಾರ್ವಾ ಸಾಂದ್ರತೆ ಹೆಚ್ಚು ಇರುವುದರಿಂದ ಈ ಗ್ರಾಮದ ಮನೆಗಳಿಗೆ ಲಾರ್ವಾಹಾರಿ ಗಪ್ಪಿ ಮತ್ತು ಗಂಬೂಸಿಯಾ ಮೀನು ವಿತರಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಿ ಎಂದರು.
ಡಾ.ಸೊನಾಲಿ, ಆಸ್ಪತ್ರೆಯ ಸಿಬ್ಬಂದಿ ಲೋಕೇಶ್, ವಿಜಯಮ್ಮ, ಮುನಿಲಕ್ಷ್ಮಮ್ಮ, ಅಕ್ಕಲರೆಡ್ಡಿ, ನಂದಿನಿ, ಗೀತಾ, ಜಾಯಿದಾ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!