ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರಿಗೆ ಬೆಂಗಳೂರಿನ ಜನಸೇವಾ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೃಷಿ ಮತ್ತು ಪಶುಸಂಗೋಪನಾ ಕ್ಷೇತ್ರದಲ್ಲಿನ ಸಾಧನೆಗಾಗಿ 2017 ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಬೆಂಗಳೂರಿನ ನಯನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 507 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶ್ವ ವಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಉಪ ಮಹಾಪೌರರಾದ ಆನಂದ, ಕೃಷ್ಣಮೂರ್ತಿ, ಜನಸೇವಾ ಸಂಸ್ಥೆಯ ಅಧ್ಯಕ್ಷ ಡಾ.ಹೆಚ್.ಬಿ. ರಾಜೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ರತ್ನ, ಸೇರಿದಂತೆ ಈಗಾಗಲೇ 15 ಪ್ರಶಸ್ತಿಗಳನ್ನು ಪಡೆದಿರುವ ಎಚ್.ಜಿ. ಗೋಪಾಲಗೌಡ ಅವರ ಕೃಷಿ ಬದುಕಿನ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕಡಿಮೆ ನೀರು ಬಳಕೆ ಹಾಗೂ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪಿನ ಬೇಸಾಯ, ಗುಣಮಟ್ಟದ ರೇಷ್ಮೆ ಗೂಡಿನ ಬೆಳೆ, ಮಳೆಯಾಶ್ರಿತವಾಗಿ ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ನೂತನ ಮಾದರಿಯ ಚಂದ್ರಂಕಿ, ಹೂಜಿ ನೊಣ ತಡೆಯಲು ಮಾಡಿರುವ ಆವಿಷ್ಕಾರ, ಕೃಷಿ ಅಧ್ಯಯನಕ್ಕಾಗಿ ರಾಷ್ಟ್ರದ ನಾನಾ ರಾಷ್ಟ್ರಗಳ ಭೇಟಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮುಂತಾದ ಕೃಷಿ ಸಾಧನೆಯನ್ನು ಗುರುತಿಸಲಾಗಿದೆ.