ನಗರದ ಗಾರ್ಡನ್ ರಸ್ತೆಯಲ್ಲಿರುವ ಹಜರತ್ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಲಿ ದರ್ಗಾದಲ್ಲಿ 777ನೇ ವರ್ಷದ ಗಂಧೋತ್ಸವವನ್ನು ಮಂಗಳವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹಜರತ್ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಲಿ ಅವರ ಸಂಸ್ಥಾನದಿಂದ ಬ್ಯಾಂಡ್‌ಸೆಟ್ ಮತ್ತು ಖವ್ವಾಲಿಯೊಂದಿಗೆ ಗಂಧೋತ್ಸವದ ಮೆರವಣಿಗೆ ನಡೆಸಲಾಯಿತು. ಬಸ್ ನಿಲ್ದಾಣದ ಬಳಿಯಿಂದ ಮೆರವಣಿಗೆಯನ್ನು ಪ್ರಾರಂಭಿಸಿ ಖಾಲೆ ಮಸ್ತಾನ್ ಷಾವಲಿ ದರ್ಗಾದಲ್ಲಿ ಗಂಧದ ಅಭಿಷೇಕ ನೆರವೇರಿಸಿ ಮಲ್ಲಿಗೆ ಹೂಗಳ ಚಾದರ್ ಸಮರ್ಪಿಸಿದರು.
ಭಕ್ತಾದಿಗಳು ಗಂಧೋತ್ಸವ ನಡೆಸಿ ಗಂಧ ಮತ್ತು ಸಿಹಿಯನ್ನು ಭಕ್ತರಿಗೆ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಭಕ್ತರಿಗೆ ಅನ್ನಸಂತರ್ಪಣೆಯನ್ನು ದರ್ಗಾ ಸಮಿತಿಯಿಂದ ಆಯೋಜಿಸಲಾಗಿತ್ತು.
ರಾತ್ರಿ ಜಾಮಿಯಾ ಮಸೀದಿಯ ಇಮಾಮ್ ಅವರಿಂದ ಬಯಾನ್ ಎಂಬ ನೀತಿ ಬೋಧಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಾಜಿ ಹಫೀಜುಲ್ಲಾ, ಷಫೀವುಲ್ಲಾ, ಹಾಜಿ ಅನ್ವರ್‌ಸಾಬ್, ಆಜಮ್‌ಖಾನ್, ಸರ್ದಾರ್‌ಖಾನ್, ಇಮಾಮ್ ಆದಮ್‌ಅಲಿ ರಜ್ವಿ, ನೂರ್‌ಷಾಸಾಬ್ ಹಾಗೂ ದರ್ಗಾ ಸಮಿತಿ ಸದಸ್ಯರು ಹಾಜರಿದ್ದರು.