ಪೂರ್ಣ ಪುಟ · Open full page
News

ವಕೀಲರ ಮೇಲೆ ಹಲ್ಲೆ, ಕೊಲೆ ಖಂಡಿಸಿ ಕಲಾಪ ಬಹಿಷ್ಕಾರ: ರಕ್ಷಣಾ ಕಾಯ್ದೆ ಬಲಪಡಿಸಲು ಆಗ್ರಹ

Advocates gathered in front of the court building during their protest against attacks on lawyers, Sidlaghatta

Sidlaghatta : ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ, ವಕೀಲರ ರಕ್ಷಣಾ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುವಂತೆ ಆಗ್ರಹಿಸಿ ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕರೆ ಮೇರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಗೌರಿಬಿದನೂರಿನ ವಕೀಲ ಸಣ್ಣಕ್ಕಿ ವೆಂಕಟರಣಪ್ಪ ಅವರ ಮೇಲಿನ ಮಾರಣಾಂತಿಕ ಹಲ್ಲೆ ಹಾಗೂ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವಕೀಲರಾದ ಮಂಜುನಾಥ್ ಮತ್ತು ಶ್ರೀರಾಮ್ ಅವರ ಕೊಲೆ ಪ್ರಕರಣಗಳನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ವಕೀಲರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಕೀಲರ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಈಗಿರುವ ವಕೀಲರ ರಕ್ಷಣಾ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ಮತ್ತಷ್ಟು ಬಲಪಡಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಕೀಲರ ಸಂಘಗಳು ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುವ ವಕೀಲರಿಗೇ ಸೂಕ್ತ ರಕ್ಷಣೆ ಇಲ್ಲದಿರುವುದು ವಿಷಾದನೀಯ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ವಕೀಲರ ಮೇಲೆ ಹಲ್ಲೆ ಹಾಗೂ ಕೊಲೆ ನಡೆಯುತ್ತಿರುವುದರಿಂದ ನಿರ್ಭೀತಿಯಿಂದ ವೃತ್ತಿ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವಕೀಲರ ರಕ್ಷಣಾ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು, ವಕೀಲರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸುವಂತಾಗಬೇಕು. ತಪ್ಪಿತಸ್ಥರಿಗೆ ಕನಿಷ್ಠ ಏಳು ವರ್ಷಗಳ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಬೇಕು. ಈ ಕುರಿತು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ಹಲ್ಲೆ ಹಾಗೂ ಕೊಲೆಗೀಡಾದ ವಕೀಲರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು. ವಕೀಲರ ರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.

ವಕೀಲರ ಸುರಕ್ಷತೆಗೆ ಸೂಕ್ತ ಕಾನೂನು ಭದ್ರತೆ ಕಲ್ಪಿಸಿ, ನ್ಯಾಯ ದೊರಕಿಸಿಕೊಡುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಿಡ್ಲಘಟ್ಟ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಎಲ್ಲ ವಕೀಲರು ಪಾಲ್ಗೊಂಡಿದ್ದರು.

ಸಂಬಂಧಿತ ಸುದ್ದಿ: ವಕೀಲರ ಸುರಕ್ಷತೆಗೆ ಆಗ್ರಹ: ಕಲಾಪದಿಂದ ಹೊರಗುಳಿದು ವಕೀಲರ ಪ್ರತಿಭಟನೆ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

error: Content is protected !!
Exit mobile version