ಪೂರ್ಣ ಪುಟ · Open full page

ನಾಲ್ಕನೇ ಬಾರಿ 600 ಕಿ.ಮೀ. ಏಕಾಂಗಿ ಪಾದಯಾತ್ರೆ: ಪಟ್ಟಣ ಪಂಚಾಯಿತಿ ಸ್ಥಾನಮಾನಕ್ಕಾಗಿ 18 ದಿನಗಳ ನಡಿಗೆ

Amjad Khan walking alone with portraits of Mahatma Gandhi and Dr. B.R. Ambedkar around his neck, in front of a roadside board listing his village demand for town panchayat status

Sidlaghatta : ಕುತ್ತಿಗೆಗೆ ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ, ಬೆನ್ನಿಗೆ ಊರಿನ ಬೇಡಿಕೆಗಳ ಫಲಕ, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸಾಗಿದ ಅಮ್ಜದ್ ಖಾನ್ ಅವರ ಏಕಾಂಗಿ ಪಾದಯಾತ್ರೆ ಮಂಗಳವಾರ ನಗರದಲ್ಲಿ ದಾರಿಹೋಕರ ಗಮನ ಸೆಳೆಯಿತು.

ಪಾದಯಾತ್ರೆ ಏಕೆ? ಏನು ಬೇಡಿಕೆ?

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಯೊಂದಿಗೆ ಅವರು ನಾಲ್ಕನೇ ಬಾರಿ ಬೆಳಗಾವಿಯತ್ತ ಪಾದಯಾತ್ರೆ ಆರಂಭಿಸಿದ್ದಾರೆ. ಶಿಡ್ಲಘಟ್ಟ ಮಾರ್ಗವಾಗಿ ಸಾಗುತ್ತಿರುವ ಅವರು ಸುಮಾರು 600 ಕಿ.ಮೀ. ದೂರವನ್ನು 18 ದಿನಗಳಲ್ಲಿ ಕ್ರಮಿಸುವ ಗುರಿ ಹೊಂದಿದ್ದಾರೆ.

ಗ್ರಾಮಸ್ಥರ ಸಮಸ್ಯೆಗಳೇನು?

ಗೌನಿಪಲ್ಲಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದರೂ ಸಿಬ್ಬಂದಿ ಕೊರತೆ, ಚರಂಡಿ ನಿರ್ವಹಣೆ, ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಂದ ಗ್ರಾಮಸ್ಥರು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಮೂರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಅಮ್ಜದ್ ಖಾನ್ ಅವರ ಅಳಲು.

ದಿನಕ್ಕೆ 35–40 ಕಿ.ಮೀ. ನಡಿಗೆ

ಪ್ರತಿದಿನ 35ರಿಂದ 40 ಕಿ.ಮೀ. ನಡೆಯುವ ಅವರು ರಾತ್ರಿ ವಿಶ್ರಾಂತಿಗೆ ಅನುಕೂಲವಾದ ಸ್ಥಳದಲ್ಲಿ ತಂಗುತ್ತಾರೆ. ಈ ಬಾರಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರ ಸಮ್ಮುಖದಲ್ಲಿ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಿದ್ದಾರೆ.

“ಇದು ನನ್ನ ವೈಯಕ್ತಿಕ ಬೇಡಿಕೆಯಲ್ಲ; ಇಡೀ ಗೌನಿಪಲ್ಲಿ ಗ್ರಾಮದ ಜನರ ಆಶಯ. ನಮ್ಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಿ, ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು” ಎಂದು ಅವರು ಮನವಿ ಮಾಡಿದರು. ನಾಲ್ಕನೇ ಪ್ರಯತ್ನದಲ್ಲಾದರೂ ತಮ್ಮೂರಿನ ದಶಕಗಳ ನಿರೀಕ್ಷೆಗೆ ಸರ್ಕಾರ ಸ್ಪಂದಿಸಬಹುದು ಎಂಬ ಆಶಯದೊಂದಿಗೆ ಅವರ ಹೆಜ್ಜೆಗಳು ಬೆಳಗಾವಿಯತ್ತ ಸಾಗುತ್ತಿವೆ.

ಸಂಬಂಧಿತ ಸುದ್ದಿ: ಮನೆ ಮನೆಗೆ ತೆರಳಿ ಮಹಿಳೆಯರ ಸಮಸ್ಯೆ ಆಲಿಕೆ: ಕಾಂಗ್ರೆಸ್ “ಮಾತೃಭಗಿನಿ ನಾರಿ ಶಕ್ತಿಗೆ ನಮನ” ಪಾದಯಾತ್ರೆ ಆರಂಭ | ಪರಿಷತ್ ಚುನಾವಣೆ ಸ್ಥಳೀಯ ಚುನಾವಣೆಗೆ ದಿಕ್ಸೂಚಿ ಎಂದ ಶಾಸಕ; ಮೀಸಲು ನಿಗದಿ ವೈಜ್ಞಾನಿಕವಲ್ಲ ಎಂದು ಆರೋಪ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Exit mobile version