
Sidlaghatta : ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸಹಕಾರಿ ಬ್ಯಾಂಕ್ ನಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸುವ ಮೂಲಕ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಆನೆಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಡಾ. ಎ.ಎಂ. ಜಯರಾಮರೆಡ್ಡಿ ಹೇಳಿದರು.
In English: Anemadagu Vyavasaya Seva Sahakara Sangha (agriculture co-operative society) president Dr. A.M. Jayaramareddy urged farmers and women’s self-help group representatives to make good use of co-operative bank facilities and repay loans on time, inaugurating the society’s 2025-26 annual general meeting at Anemadagu village in Doddathekahalli Gram Panchayat, Sidlaghatta taluk. The society reported a net profit of about ₹2 lakh for the year.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಮಡಗು ಗ್ರಾಮದಲ್ಲಿ ಸಂಘದ ಆವರಣದಲ್ಲಿ ಬುಧವಾರ ನಡೆದ 2025–26ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ರಾಷ್ಟ್ರೀಯ ಬ್ಯಾಂಕ್ ಗಳಿಗೆ ಹೋಲಿಸಿದರೆ ಸಹಕಾರಿ ಬ್ಯಾಂಕ್ ನಲ್ಲಿ ರೈತರಿಗೆ ಹಲವು ಅನುಕೂಲಕರ ಸೌಲಭ್ಯಗಳು ದೊರೆಯುತ್ತವೆ. ಹೀಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿ ಬ್ಯಾಂಕ್ ನಲ್ಲಿ ವ್ಯವಹರಿಸಬೇಕು” ಎಂದರು.
“ಸಾಲ ಪಡೆದವರು ನಿಗದಿತ ಸಮಯದಲ್ಲಿ ಮರುಪಾವತಿಸಿ ಮತ್ತೆ ಸಾಲ ಪಡೆಯುವುದರಿಂದ ಸಂಘದ ಆರ್ಥಿಕ ಚಟುವಟಿಕೆಗಳು ಬಲಗೊಳ್ಳುತ್ತವೆ. ಇದರಿಂದ ಇತರ ರೈತರಿಗೂ ಸಾಲ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ರೈತರು ಮರುಪಾವತಿ ಮಾಡುವ ಪ್ರಮಾಣ ಹೆಚ್ಚಿದಂತೆ ಡಿಸಿಸಿ ಬ್ಯಾಂಕ್ನಿಂದ ಹೆಚ್ಚಿನ ಸಾಲ ಸೌಲಭ್ಯ ಪಡೆಯಲು ಸಂಘಕ್ಕೆ ಅವಕಾಶ ದೊರೆಯುತ್ತದೆ” ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಚಿಕ್ಕತೇಕಹಳ್ಳಿ ಸಿ. ವೆಂಕಟೇಶಪ್ಪ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ತಮ್ಮ ದೈನಂದಿನ ಹಣಕಾಸಿನ ವ್ಯವಹಾರಗಳನ್ನು ಸಹಕಾರಿ ಬ್ಯಾಂಕ್ ನಲ್ಲೇ ನಡೆಸುವ ಮೂಲಕ ಲಭ್ಯವಿರುವ ಸೇವೆಗಳನ್ನು ಪಡೆದುಕೊಳ್ಳಬೇಕು. ರೈತರಿಗೆ ಇತರ ಬ್ಯಾಂಕ್ ಗಳಲ್ಲಿ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತದೆ. ಸಹಕಾರಿ ಬ್ಯಾಂಕ್ ನಲ್ಲಿ ಬಡ್ಡಿರಹಿತ ಸಾಲ ಸೌಲಭ್ಯವಿದ್ದು, ಅದನ್ನು ಸಕಾಲದಲ್ಲಿ ಮರುಪಾವತಿಸಿ ಇತರರಿಗೂ ಅನುಕೂಲವಾಗುವಂತೆ ಮಾಡಬೇಕು ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವರೆಡ್ಡಿ 2025–26ನೇ ಸಾಲಿನ ವಾರ್ಷಿಕ ಆಯವ್ಯಯ ಮಂಡಿಸಿದರು. ಸಂಘವು ಈ ಸಾಲಿನಲ್ಲಿ ಸುಮಾರು ₹2 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಭೆಗೆ ತಿಳಿಸಿದರು. ಇತ್ತೀಚೆಗಷ್ಟೇ ಪಿ.ಎಲ್.ಡಿ ಬ್ಯಾಂಕ್ ಮಹಾಸಭೆ ಸೆ.19ರಂದು ನಡೆಯಲಿದೆ ಎಂದು ಪ್ರಕಟಿಸಲಾಗಿತ್ತು.
ನಿರ್ದೇಶಕರಾದ ಕೆ. ಬೈರಾರೆಡ್ಡಿ, ನರಸಿಂಹಪ್ಪ, ಎ.ಎನ್. ಲಕ್ಷ್ಮಿನಾರಾಯಣ, ಲಕ್ಷ್ಮಯ್ಯ, ಕೆ. ನರಸಿಂಹಮೂರ್ತಿ, ಟಿ.ಎನ್. ಆಂಜನೇಯರೆಡ್ಡಿ, ಕೆ. ಚಂದ್ರಕಳ, ಸುಶೀಲಮ್ಮ, ಎಂಪಿಸಿಎಸ್ ಅಧ್ಯಕ್ಷ ಕೆ. ನಾರಾಯಣಸ್ವಾಮಿ, ಮಾಜಿ ಉಪಾಧ್ಯಕ್ಷ ಡಿ. ಕೃಷ್ಣಪ್ಪ, ಸಂಘದ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.