
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕಲಹಳ್ಳಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವುದನ್ನು ಖಂಡಿಸಿ ಗ್ರಾಮದ ಮಹಿಳೆಯರು ಬುಧವಾರ ಖಾಲಿ ಬಿಂದಿಗೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
In English: Women from Tokalahalli village, under Thimmanayakanahalli Gram Panchayat in Sidlaghatta taluk, laid siege to the panchayat office carrying empty water pots on Wednesday, protesting a two-month-long drinking water shortage. Officials promised to fit a pump motor to an existing borewell by Thursday and supply water via tanker in the interim, after which the protest was withdrawn.
ಸಮಸ್ಯೆ ಏನು?
ಗ್ರಾಮದಲ್ಲಿ ಹಲವು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಗ್ರಾಮದಲ್ಲಿ ಎರಡು ಕೊಳವೆಬಾವಿಗಳಿದ್ದು, ನೀರು ಲಭ್ಯವಿದ್ದರೂ ಪಂಪ್ ಮೋಟಾರ್ ಅಳವಡಿಸಿ ನೀರು ಪೂರೈಸಲು ಪಂಚಾಯಿತಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಜಲಗಾರರ ಕೊರತೆಯಿಂದಲೂ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಗ್ರಾಮದ ನಿವಾಸಿ ಕಾವ್ಯಶ್ರಿ ಮಾತನಾಡಿ, “ಕಳೆದ ಹಲವು ದಿನಗಳಿಂದ ಕುಡಿಯುವ ನೀರು ಬಂದಿಲ್ಲ. ಮನೆಮನೆಗೆ ಸಮರ್ಪಕವಾಗಿ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು. ಯುವಕ ಮುನಿಕೃಷ್ಣ ಮಾತನಾಡಿ, “ಎರಡು–ಮೂರು ತಿಂಗಳಿಂದ ನೀರಿಗಾಗಿ ಪರಿತಪಿಸುತ್ತಿದ್ದೇವೆ. ಪ್ರಜಾ ಸೇವಾ ಆಂದೋಲನದಲ್ಲಿ ಸಮಸ್ಯೆ ತಿಳಿಸಿದಾಗ, ನಾಳೆಯೇ ನೀರು ಪೂರೈಸುವುದಾಗಿ ಇಒ ಹೇಮಾವತಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ನೀರು ಪೂರೈಕೆಯಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಂಚಾಯಿತಿ ಪ್ರತಿಕ್ರಿಯೆ ಏನು?
“ಪಂಚಾಯಿತಿಯಲ್ಲಿ ಅನುದಾನದ ಕೊರತೆಯಿದೆ. ಈಗಾಗಲೇ ₹6 ಲಕ್ಷ ಸಾಲವಿದೆ. 15ನೇ ಹಣಕಾಸು ಯೋಜನೆಯ ಅನುದಾನ ಬಂದು ಎರಡು ವರ್ಷಗಳಾಗಿದೆ” ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ತಿಳಿಸಿದ್ದಾರೆ ಎಂದು ಅವರು ಹೇಳಿದರು. “ಪಂಚಾಯಿತಿಯಲ್ಲಿ ಹಣದ ಕೊರತೆ ಇದ್ದರೆ ಗ್ರಾಮಸ್ಥರು ನೀರಿಲ್ಲದೆ ಇರಬೇಕೇ” ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ಅಭಿವೃದ್ಧಿ ಅಧಿಕಾರಿ ಅರುಣ, “ಗುರುವಾರ ಕೊಳವೆಬಾವಿಗೆ ಪಂಪ್ ಮೋಟಾರ್ ಅಳವಡಿಸಿ ನೀರು ಪೂರೈಸಲಾಗುವುದು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುವುದು” ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಗ್ರಾಮದಲ್ಲಿರುವ ಕೊಳವೆಬಾವಿಗಳನ್ನು ಪರಿಶೀಲಿಸಿ ನೀರಿನ ಲಭ್ಯತೆ ಮತ್ತು ಪ್ರಮಾಣವನ್ನು ಗುರುತಿಸಿ, ತಕ್ಷಣ ನೀರು ಪೂರೈಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇತ್ತೀಚೆಗಷ್ಟೇ ಜರುಗಹಳ್ಳಿ ಕಾಲೋನಿಯ ನಿವಾಸಿಗಳೂ ಮೂಲಸೌಕರ್ಯ ನಿರ್ಲಕ್ಷ್ಯದ ಬಗ್ಗೆ ಆಗ್ರಹಿಸಿದ್ದರು.
ಪ್ರತಿಭಟನೆಯಲ್ಲಿ ಮುನಿಯಮ್ಮ, ಆನಂದಮ್ಮ, ನವಿತಾ, ಯಾಮಕ್ಕ, ಯರಮ್ಮ, ಗೌರಮ್ಮ, ವೆಂಕಟರತ್ನಮ್ಮ, ಮಂಜುಳಮ್ಮ, ನಾಗಮಣಿ, ಚೌಡಮ್ಮ, ಶಾಂತಮ್ಮ, ಅನಿತಾ, ಗಂಗಲಪ್ಪ, ಯತೀಶ್, ಬಾಲರಾಜು, ಅಜಯ್, ನಾರಾಯಣಸ್ವಾಮಿ, ಗುರುಮೂರ್ತಿ, ಆಂಜಿನಪ್ಪ, ವೆಂಕಟರೋಣಪ್ಪ ಭಾಗವಹಿಸಿದ್ದರು.