ಸ್ಮಶಾನ ಜಾಗ ಒತ್ತುವರಿ ವಿವಾದ: ತಹಶೀಲ್ದಾರ್ ಸ್ಥಳ ಪರಿಶೀಲನೆ, ದಾಖಲೆ ಸಲ್ಲಿಸಲು ಸೂಚನೆ

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಬಂಡಪ್ಪನಹಳ್ಳಿ ಸಮೀಪ ಸಾರ್ವಜನಿಕ ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಜಮೀನಿನ ಒತ್ತುವರಿ ವಿವಾದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಎನ್. ಗಗನಸಿಂಧು ಅವರು ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಮಶಾನಕ್ಕೆ ಮೀಸಲಿಟ್ಟಿರುವ ಜಮೀನು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಿಕೊಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶುಕ್ರವಾರ ಸ್ಥಳ ಪರಿಶೀಲನೆ ಕೈಗೊಂಡರು.
ಈ ಸಂದರ್ಭದಲ್ಲಿ ಗ್ರಾಮಸ್ಥರ ಎರಡು ಗುಂಪುಗಳು ತಮ್ಮ ತಮ್ಮ ವಾದಗಳನ್ನು ಮಂಡಿಸಿದವು. ಸ್ಮಶಾನಕ್ಕಾಗಿ ಈಗಾಗಲೇ ಮೀಸಲಿಟ್ಟಿರುವ 12 ಗುಂಟೆ ಜಮೀನು ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುವುದಿಲ್ಲ. ಬಹುತೇಕ ಕುಟುಂಬಗಳಿಗೆ ಸ್ವಂತ ಸ್ಮಶಾನ ಜಾಗ ಇಲ್ಲದಿರುವುದರಿಂದ ಸಾರ್ವಜನಿಕ ಸ್ಮಶಾನವನ್ನೇ ಅವಲಂಬಿಸಿದ್ದಾರೆ. ಅಲ್ಲದೆ, ಪಕ್ಕದ ಜಮೀನಿನಲ್ಲಿ ಕಳೆದ 50–60 ವರ್ಷಗಳಿಂದ ಅಂತ್ಯಸಂಸ್ಕಾರ ನಡೆಸಲಾಗುತ್ತಿದ್ದು, ಅಲ್ಲಿ ಸಮಾಧಿಗಳೂ ಇವೆ. ಆದ್ದರಿಂದ ಆ ಜಾಗವನ್ನೂ ಸ್ಮಶಾನಕ್ಕೆ ಮೀಸಲಿಡಬೇಕು ಎಂದು ಗ್ರಾಮಸ್ಥರ ಒಂದು ಗುಂಪು ಒತ್ತಾಯಿಸಿತು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮತ್ತೊಂದು ಗುಂಪು, ವಿವಾದಿತ ಜಮೀನು ತಮ್ಮ ಸ್ವಂತ ಹಿಡುವಳಿಗೆ ಸೇರಿದ್ದು, ಈ ಹಿಂದೆ ಕೆಲವರು ಅಲ್ಲಿ ಸಮಾಧಿಗಳನ್ನು ನಿರ್ಮಿಸಿದ್ದಾರೆ. ಈ ಸಂಬಂಧ ನ್ಯಾಯಾಲಯ ಹಾಗೂ ಸಂಬಂಧಪಟ್ಟ ಇಲಾಖೆಗಳಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಜಮೀನನ್ನು ಸ್ಮಶಾನಕ್ಕೆ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿತು.
ಗ್ರಾಮಸ್ಥರ ವಾದ ಆಲಿಸಿದ ತಹಶೀಲ್ದಾರ್, ಈಗಾಗಲೇ ಸಮಾಧಿಗಳಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಗ್ರಾಮದ ಸಮೀಪವಿರುವ ಸರ್ಕಾರಿ ತೋಪಿನ ಸರ್ವೆ ನಂಬರ್ 2ರಲ್ಲಿನ 20 ಗುಂಟೆ ಜಮೀನನ್ನು ಸ್ಮಶಾನಕ್ಕೆ ಮೀಸಲಿಡುವ ಸಾಧ್ಯತೆಯ ಬಗ್ಗೆಯೂ ಚರ್ಚಿಸಲಾಯಿತು. ಆದರೆ, ಈ ಜಾಗ ಗ್ರಾಮಕ್ಕೆ ಹೊಂದಿಕೊಂಡಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಸಂಚರಿಸುವ ಪ್ರದೇಶವಾಗಿದೆ. ಇಲ್ಲಿ ಸ್ಮಶಾನ ನಿರ್ಮಿಸುವುದು ಬೇಡ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.
ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳದೆ ಸ್ಥಳ ಪರಿಶೀಲನೆ ಪೂರ್ಣಗೊಳಿಸಿದ ತಹಶೀಲ್ದಾರ್, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ, ಗ್ರಾಮಸ್ಥರೊಂದಿಗೆ ಮತ್ತೊಮ್ಮೆ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಂದಾಯ ನಿರೀಕ್ಷಕ ವೇಣುಗೋಪಾಲ್, ಗ್ರಾಮ ಆಡಳಿತಾಧಿಕಾರಿ ನಯನಾ, ಗ್ರಾಮದ ಮುಖಂಡರಾದ ಬಿ.ಸಿ. ವೆಂಕಟೇಶಪ್ಪ, ಚಿಕ್ಕಪಾಪಣ್ಣ, ಕರಗಪ್ಪ, ಜಿ.ಎಂ. ನಾಗರಾಜ್, ಜಿ.ವಿ. ಸುರೇಶ್, ರಾಮಾಂಜಿನಪ್ಪ, ಮುನೇಗೌಡ, ಎಂ. ರಾಮಪ್ಪ, ನಾರಾಯಣಸ್ವಾಮಿ, ಜಿ.ಎಂ. ಶಿವಾನಂದ, ಜಿ.ಡಿ. ರಮೇಶ್, ಜಿ.ಡಿ. ನಾಗರಾಜ್, ಸೊಣ್ಣೇಗೌಡ, ಜಿ.ಕೆ. ಶಿವಾನಂದ, ಜಿ.ಡಿ. ವೆಂಕಟೇಶ್, ನಾರಾಯಣಪ್ಪ ಇದ್ದರು.
ಸಂಬಂಧಿತ ಸುದ್ದಿ: ಭೂಮಿ, ಸ್ಮಶಾನ, ನಿವೇಶನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ
FAQ
ಸ್ಮಶಾನ ಜಾಗದ ವಿವಾದದಲ್ಲಿ ತಹಶೀಲ್ದಾರ್ ಏನು ಸೂಚಿಸಿದರು? ಈಗಾಗಲೇ ಸಮಾಧಿಗಳಿರುವ ಜಮೀನಿನ ದಾಖಲೆಗಳನ್ನು ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು.
ಮುಂದಿನ ಕ್ರಮ ಏನು? ದಾಖಲೆಗಳನ್ನು ಪರಿಶೀಲಿಸಿ, ಗ್ರಾಮಸ್ಥರೊಂದಿಗೆ ಮತ್ತೊಮ್ಮೆ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು.
For Daily Updates WhatsApp ‘HI’ to 7406303366
Summary in English
Tahsildar N. Gagana Sindhu visited Ganganahalli village on Friday with revenue staff to inspect land reserved for a public cemetery, after villagers asked for an encroachment to be cleared. One group said the existing 12 guntas is not enough and wants the adjoining land, where burials have taken place for 50-60 years, reserved as well; another group said the land is theirs and is the subject of legal proceedings. The tahsildar asked for records of the land and said a decision will follow after review and another discussion with villagers; no final decision was taken.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news