Home News ಇ-ಪೇಮೆಂಟ್ ಅವ್ಯವಸ್ಥೆ; ರೇಷ್ಮೆ ನೂಲು ಬಿಚ್ಚಾಣಿಕೆದಾರ ಪ್ರತಿಭಟನೆ

ಇ-ಪೇಮೆಂಟ್ ಅವ್ಯವಸ್ಥೆ; ರೇಷ್ಮೆ ನೂಲು ಬಿಚ್ಚಾಣಿಕೆದಾರ ಪ್ರತಿಭಟನೆ

0
Sidlaghatta Government Govt silk cocoon Market Reelers Farmers Protest New e Auction Facility Problem

ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ-ಪೇಮೆಂಟ್ ಅವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮಾರುಕಟ್ಟೆಯಲ್ಲಿ ಗುರುವಾರ ಸುಮಾರು 2 ಗಂಟೆಗಳ ಕಾಲ ಇ-ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಉಪನಿರ್ದೇಶಕರನ್ನು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಅತೀ ದೊಡ್ಡ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸುವ ಮೊದಲು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಬೆಳೆಗಾರರೊಂದಿಗೆ ಕನಿಷ್ಟ ಸೌಜನ್ಯಕ್ಕಾದರೂ ಸಭೆ ನಡೆಸದೆ ಮಾರುಕಟ್ಟೆಯ ಅಧಿಕಾರಿಗಳು ಸರ್ವಾಧಿಕಾರ ಧೋರಣೆಯನ್ನು ಅನುಸರಿಸಿದ್ದಾರೆ. ಇದರ ಫಲದಿಂದಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಬೆಳೆಗಾರರು ಪ್ರತಿನಿತ್ಯ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಮಾರುಕಟ್ಟೆಯ ಉಪನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.

ಮಾರುಕಟ್ಟೆಯಲ್ಲಿ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ತಮ್ಮ ಅಭ್ಯಂತರವಿಲ್ಲ, ಆದರೆ ಈ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಮಾರುಕಟ್ಟೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಜೊತೆಗೆ ಈ ವ್ಯವಸ್ಥೆ ಜಾರಿಯಾದ ಬಳಿಕ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಬರುವುದೇ ಕಡಿಮೆಯಾಗಿದೆ. ರೇಷ್ಮೆ ಬೆಳೆಗಾರರು ಮಾರುಕಟ್ಟೆಯ ಹೊರಭಾಗದಲ್ಲಿ ತಮ್ಮ ರೇಷ್ಮೆ ಗೂಡುಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಗೆ ಬರುವ ನೂಲು ಬಿಚ್ಚಾಣಿಕೆದಾರರು ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.

ಮಾರುಕಟ್ಟೆಯಲ್ಲಿ ಉಪನಿರ್ದೇಶಕರ ಖಾತೆಗೆ 2 ಸಾವಿರ ರೂ.ಗಳನ್ನು ಮುಂಗಡವಾಗಿ ಪಾವತಿಸಿ ಇ ಬೀಟ್ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಮಾರುಕಟ್ಟೆಯ ಉಪನಿರ್ದೇಶಕರ ಖಾತೆಗೆ ಹಣ ಪಾವತಿಸಿದರೂ ಸಹ ನೂಲು ಬಿಚ್ಚಾಣಿಕೆದಾರರ ಮೊಬೈಲ್‌ಗಳಿಗೆ ಸ್ವೀಕೃತಿಯ ಸಂದೇಶ ಬರುತ್ತಿಲ್ಲ. ಇದರಿಂದಾಗಿ ಆರ್ಥಿಕ ಭದ್ರತೆಯಿಲ್ಲದೆ, ನೂಲು ಬಿಚ್ಚಾಣಿಕೆದಾರರು ವ್ಯಾಪಾರ ವಹಿವಾಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇ-ಪೇಮೆಂಟ್ ವ್ಯವಸ್ಥೆಯಿಂದ ಬಡ ನೂಲು ಬಿಚ್ಚಾಣಿಕೆದಾರರು ಜೀವನ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಬಡವರ ಶಾಪ ಅಧಿಕಾರಿಗಳಿಗೆ ತಟ್ಟುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಲವಾರು ಸರ್ಕಾರಿ ರೇಷ್ಮೆ ಮಾರುಕಟ್ಟೆಗಳಲ್ಲಿ ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿಲ್ಲ. ಆದರೆ ಶಿಡ್ಲಘಟ್ಟದಲ್ಲಿ ಮಾತ್ರ ಯಾವುದೇ ರೀತಿಯ ಪೂರ್ವ ಸಿದ್ದತೆಯಿಲ್ಲದೆ, ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸದೆ, ಅಧಿಕಾರಿಗಳು ತುಘಲಕ್ ದರ್ಬಾರು ನಡೆಸುತ್ತಿದ್ದಾರೆ. ಇದರಿಂದ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಆರ್ಥಿಕವಾಗಿ ದಿವಾಳಿಯಾಗಲು ಹುನ್ನಾರ ನಡೆಸಿದ್ದಾರೆ ಎಂದು ಗಂಭಿರವಾಗಿ ಆರೋಪಿಸಿ ಮಾರುಕಟ್ಟೆಯಲ್ಲಿ ಬ್ಯಾಂಕ್ ಸ್ಥಾಪಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಭದ್ರಗೊಳಿಸಿದ ನಂತರ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಮತ್ತು ಸಹಾಯಕ ನಿರ್ದೇಶಕ ನರಸಿಂಹಮೂರ್ತಿ ಅವರು ಮಾತನಾಡಿ, ರೇಷ್ಮೆ ನೂಲು ಬಿಚ್ಚಾಣಿಕೆದಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ತಮಗೆ ಅರಿವಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಪ್ರತಿನಿತ್ಯ ವರದಿಗಳನ್ನು ಸಲ್ಲಿಸುತ್ತಿದ್ದೇವೆ. ಬ್ಯಾಂಕಿನಲ್ಲಿ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷಗಳಿಂದ ಹಣ ಸಂದಾಯವಾಗಲು ವಿಳಂಬವಾಗುತ್ತಿದೆ. ವ್ಯವಸ್ಥೆಯ ಸುಧಾರಣೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಇ-ಪೇಮೆಂಟ್ ಜೊತೆಗೆ ನೇರವಾಗಿ ಹಣಪಾವತಿಸಲು ಸಹ ಅನುಕೂಲ ಕಲ್ಪಿಸಲಾಗುವುದೆಂದು ಅವರು ಭರವಸೆ ನೀಡಿದ ಬಳಿಕ ರೀಲರುಗಳು ಪ್ರತಿಭಟನೆಯನ್ನು ವಾಪಸ್ ಪಡೆದರು.

ಈ ಸಂದರ್ಭದಲ್ಲಿ ರಾಜ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಕಾರ್ಯಾಧ್ಯಕ್ಷ ಮೊಹಮ್ಮದ್ ಅನ್ವರ್, ಮೇಲೂರು ಅಜೀಜ್, ಸಿಲ್ಕ್ ಫಡರೇಷನ್ ಮಾಜಿ ಉಪಾಧ್ಯಕ್ಷ ಜಿ. ರೆಹಮಾನ್, ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಅಧ್ಯಕ್ಷ ಅನ್ಸರ್‌ಖಾನ್, ಉಪಾಧ್ಯಕ್ಷ ಆನಂದ್, ಬಾಂಬೆ ನವಾಜ್, ನವೀದ್‌ಪಾಷ, ಮುನಿರಾಜು ಹಜರಿದ್ದರು.

ನಗರ ಪೋಲೀಸ್ ಠಾಣೆಯ ಪಿಎಸ್‌ಐ ಸತೀಶ್ ಮತ್ತು ಸಿಬ್ಬಂದಿ ಸೂಕ್ತ ಪೋಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version