Home News ಕಚ್ಚಾ ರೇಷ್ಮೆಯನ್ನು ಮಾರಲು ಸರ್ಕಾರ ಮಾರುಕಟ್ಟೆಯನ್ನು ಸ್ಥಾಪಿಸಬೇಕು

ಕಚ್ಚಾ ರೇಷ್ಮೆಯನ್ನು ಮಾರಲು ಸರ್ಕಾರ ಮಾರುಕಟ್ಟೆಯನ್ನು ಸ್ಥಾಪಿಸಬೇಕು

0
Silk Govt cocoon Market e Transaction Reelers Press Meet

ರೇಷ್ಮೆ ನೂಲು ಬಿಚ್ಚಾಣಿಕೆದಾರರು ತಯಾರಿಸುವ ರೇಷ್ಮೆಯನ್ನು ಮಾರಲು ಸರ್ಕಾರ ಮಾರುಕಟ್ಟೆಯನ್ನು ಸ್ಥಾಪಿಸಬೇಕು. ಅದರಿಂದ ನಾವುಗಳು ಇ ಬಿಡ್ಡಿಂಗ್ ನಲ್ಲಿ ರೇಷ್ಮೆ ಗೂಡನ್ನು ಖರೀದಿಸಿ, ಇ ಪೇಮೆಂಟ್ ಮಾಡಲು ಅನುಕೂಲವಾಗುತ್ತದೆ ಎಂದು ರಾಜ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಕಾರ್ಯಾಧ್ಯಕ್ಷ ಮೊಹಮ್ಮದ್ ಅನ್ವರ್ ಸರ್ಕಾರವನ್ನು ಆಗ್ರಹಿಸಿದರು.

 ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯವನ್ನು ಪಣಕ್ಕಿಟ್ಟು ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಆರ್ಥಿಕ ಅಭಿವೃದ್ದಿಗಾಗಿ ಸರ್ಕಾರಗಳು ವ್ಯಾಪಾರ ಮತ್ತು ವಹಿವಾಟಿಗೆ ಅನುಗುಣವಾಗಿ ವಿಶೇಷ ಯೋಜನೆಗಳನ್ನು ರೂಪಿಸಿಲ್ಲ ಎಂದು ದೂರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಅನುಮೋದನೆಯಾಗಿದ್ದ 166 ಕೋಟಿ ರೂ.ಗಳ ಅನುದಾನವನ್ನು ಜಾರಿಗೊಳಿಸುವಲ್ಲಿ ಇಂದಿನ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

 ರಾಜ್ಯದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಅಭಿವೃದ್ದಿಗಾಗಿ ರಚಿಸಿರುವ ಬಸವರಾಜ್ ವರದಿಯ ಶಿಫಾರಸ್ಸುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ಮತ್ತು ಹಾಲು ಉತ್ಪಾದನೆಯಲ್ಲಿ ಅಗ್ರ ಸ್ಥಾನವನ್ನು ಹೊಂದಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಸಹಿತ ರಾಜ್ಯಾದ್ಯಂತ ರೇಷ್ಮೆ ಉದ್ದಿಮೆಯನ್ನು ನೆಚ್ಚಿಕೊಂಡು ಸುಮಾರು 6 ಲಕ್ಷ ರೇಷ್ಮೆ ನೂಲು ಬಿಚ್ಚಾಣಿಕೆದಾರರು, ರೇಷ್ಮೆ ಬೆಳೆಗಾರರು, ಹುರಿಕಾರರು ಮತ್ತು ಕೂಲಿ ಕಾರ್ಮಿಕರು ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಸುಮಾರು 15 ಸಾವಿರ ಕೋಟಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ ಸರ್ಕಾರ ಈ ಉದ್ಯಮದಲ್ಲಿ ತೊಡಗಿರುವ ಜನರು ಹೇಗೆ ಹಣಕಾಸಿನ ವ್ಯವಸ್ಥೆಯನ್ನು ಸರಿದೂಗಿಸುತ್ತಿದ್ದಾರೆ ಎಂಬುದನ್ನು ಕನಿಷ್ಟ ಇದುವರೆಗೆ ಚಿಂತನೆ ಮಾಡಿಲ್ಲ. ರೇಷ್ಮೆ ಮಾರುಕಟ್ಟೆಯ ಇಲಾಖೆಯ ಅಧಿಕಾರಿಗಳು ಹಿಂದೆ ಉದ್ಯಮದ ಅಭಿವೃದ್ದಿಗಾಗಿ ನೀಡಿದ ಸಹಕಾರ ಪ್ರಸ್ತುತ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀಡುತ್ತಿಲ್ಲ. ರಾಮನಗರದಲ್ಲಿರುವ ವ್ಯವಸ್ಥೆಯನ್ನು ಶಿಡ್ಲಘಟ್ಟ ಮಾರುಕಟ್ಟೆಯಲ್ಲಿ ಸಹ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

 ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಉತ್ತಮ ಧಾರಣೆ ದೊರೆಯಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಜಾರಿಗೊಳಿಸಿದ ಇ-ಬಿಡ್ ವ್ಯವಸ್ಥೆಯಿಂದ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ಪ್ರತಿನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇ-ಬಿಡ್ ವ್ಯವಸ್ಥೆಯಿಂದ ನೈಜ ನೂಲು ಬಿಚ್ಚಾಣಿಕೆದಾರರಿಗಿಂತಲೂ ಮಧ್ಯವರ್ತಿಗಳಿಗೆ ಅನುಕೂಲವಾಗಿದೆ. ಅಧಿಕಾರಿಗಳು ಸಹ ಸರ್ಕಾರಿ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಇಲಾಖೆಯ ಮುಖ್ಯಸ್ಥರೊಂದಿಗೆ ಮತ್ತು ಸಚಿವರೊಂದಿಗೆ ಸಮಾಲೋಚನೆ ನಡೆಸುವ ವ್ಯವಸ್ಥೆಯನ್ನು ಜಾರಿಗೊಳಿಸಿಲ್ಲ ಎಂದರು.   

 ಮಾರುಕಟ್ಟೆಯಲ್ಲಿ ಇ-ಬಿಡ್ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸದೆ, ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಬೆಳೆಗಾರರೊಂದಿಗೆ ಪೂರ್ವ ಸಿದ್ದತೆ ಸಭೆ ನಡೆಸದೇ, ಏಕಾಏಕಿಯಾಗಿ ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ಬಡ ಮತ್ತು ಸಣ್ಣ ರೇಷ್ಮೆ ನೂಲು ಬಿಚ್ಚಾಣಿಕೆದಾರರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಸಲಾಗಿದೆ. ಪರೋಕ್ಷವಾಗಿ ರೇಷ್ಮೆ ಉದ್ದಿಮೆಯನ್ನು ಭವಿಷ್ಯದಲ್ಲಿ ಸರ್ವನಾಶ ಮಾಡಲು ಷಡ್ಯಂತರ ನಡೆಸಿದ್ದಾರೆ. ಇ-ಹರಾಜು ಮತ್ತು ಇ-ಪೇಮೆಂಟ್ ವ್ಯವಸ್ಥೆಯಿಂದ ಮಾರುಕಟ್ಟೆಯಲ್ಲಿ ಗೂಡು ಬಾರದೆ ಎಲ್ಲರೂ ಸಂಕಷ್ಟದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

 ಮಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರಿಗೆ ತ್ವರಿತವಾಗಿ ಹಣ ಪಾವತಿಸುವ ಸಲುವಾಗಿ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಬೇಕು. ಮಾರುಕಟ್ಟೆಯಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ರೇಷ್ಮೆ ಬೆಳೆಗಾರರು ಮತ್ತು ಅಧಿಕಾರಿಗಳು ಹೊರತುಪಡಿಸಿ ಬೇರೆಯವರ ಪ್ರವೇಶವನ್ನು ನಿರ್ಬಂಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರೇಷ್ಮೆ ನೂಲು ಬಿಚ್ಚಾಣಿಕೆದಾರರು ಉತ್ಪಾದನೆ ಮಾಡುವ ನೂಲು ಖರೀದಿ ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

 ಫೆಡರೇಷನ್‌ನ ಮಾಜಿ ಉಪಾಧ್ಯಕ್ಷ ಜಿ.ರೆಹಮಾನ್, ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಹಿರಿಯ ಮುಖಂಡ ಮೇಲೂರು ಅಜೀಜ್, ರಾಜ್ಯ ರೀಲರುಗಳ ಸಂಘದ ಉಪಾಧ್ಯಕ್ಷ ರಾಮಕೃಷ್ಣ, ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಅಧ್ಯಕ್ಷ ಅನ್ಸರ್‌ಖಾನ್, ಉಪಾಧ್ಯಕ್ಷ ಆನಂದ್, ಖಜಾಂಚಿ ಕೆವಿ ಮಂಜುನಾಥ್, ಸಿಎಂ ಬಾಬು, ಸನಾವುಲ್ಲಾ, ಮುಸ್ತಕೀಂ, ಮುನಿಕೃಷ್ಣ, ಬಾಷಾ, ವಿಜಯಪುರ ತಾಲ್ಲೂಕು ರೀಲರುಗಳ ಸಂಘದ ಅಧ್ಯಕ್ಷ ಸಾದಿಕ್‌ಪಾಷ, ಸಿಲ್ಕ್ ಸೊಸೈಟಿಯ ಅಧ್ಯಕ್ಷ ಆರ್ ಕಲೀಂ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version