
Sidlaghatta, chikkaballpur : ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಜಾರಿಗೆ ತಂದಿರುವ ಇ-ಹರಾಜು ವ್ಯವಸ್ಥೆ (e-Auction System) ಕುರಿತು ನಡೆಯುತ್ತಿರುವ ವಿವಾದದ ನಡುವೆ, ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ ಅವರು “ಈ ವ್ಯವಸ್ಥೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ಲೋಪ ದೋಷಗಳಿದ್ದರೂ, ಅವುಗಳನ್ನು ಸರಿಪಡಿಸಿ ಇ-ಹರಾಜನ್ನು ಮುಂದುವರೆಸಬೇಕು. ರೈತರಿಗೆ ಅಥವಾ ರೀಲರ್‌ಗಳಿಗೆ ಯಾವುದೇ ರೀತಿಯ ಅನಾನುಕೂಲ ಇಲ್ಲ,” ಎಂದು ಸ್ಪಷ್ಟಪಡಿಸಿದರು.
ನಗರದ ರೇಷ್ಮೆ ಬಿತ್ತನೆ ಕೋಠಿ ಸಭಾಂಗಣದಲ್ಲಿ ನಡೆದ ರೈತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಶಾಸಕ ಬಿ.ಎನ್. ರವಿಕುಮಾರ್ ಅವರು ಜಿಲ್ಲಾ ಕೆಡಿಪಿ ಸಭೆಯಲ್ಲಿ “ಇ-ಹರಾಜು ವ್ಯವಸ್ಥೆಯನ್ನು ರದ್ದುಪಡಿಸಬೇಕು” ಎಂದು ಪ್ರಸ್ತಾಪಿಸಿದ್ದ ಹಿನ್ನೆಲೆ, ಈ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ತಾಲ್ಲೂಕಿನ ನಾನಾ ಭಾಗಗಳಿಂದ ಬಂದ ರೇಷ್ಮೆ ಬೆಳೆಗಾರರು ಇ-ಹರಾಜು ಪರವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. “ಹರಾಜು ಮೊದಲು ರೇಷ್ಮೆಗೂಡಿನ ಗುಣಮಟ್ಟ ಪರೀಕ್ಷೆ ನಡೆಯಬೇಕು. ಕನಿಷ್ಠ ಬೆಲೆ ನಿಗದಿಪಡಿಸಿ ಅದಕ್ಕಿಂತ ಕಡಿಮೆ ದರದಲ್ಲಿ ಹರಾಜು ಆರಂಭಿಸಬಾರದು. ಹರಾಜು ನಂತರ ಅರ್ಧ ಗಂಟೆಯೊಳಗೆ ತೂಕ ಹಾಕಿ, ಎರಡು ಗಂಟೆಯೊಳಗೆ ರೈತನ ಬ್ಯಾಂಕ್ ಖಾತೆಗೆ ಹಣ ಜಮೆ ಆಗಬೇಕು,” ಎಂದು ಅವರು ಒತ್ತಾಯಿಸಿದರು.
ರೈತರು ಮಾರುಕಟ್ಟೆ ಆವರಣದಲ್ಲೇ ಬ್ಯಾಂಕ್ ಶಾಖೆ ತೆರೆಯಬೇಕು, ಹಾಗೆಯೇ ಭಾನುವಾರ ಹಾಗೂ ಸರ್ಕಾರಿ ರಜಾದಿನಗಳಲ್ಲೂ ಪಾವತಿ ವ್ಯವಸ್ಥೆ ಇರಬೇಕು ಎಂದು ವಿನಂತಿಸಿದರು. ಕೆಲವು ರೈತರು ಮತ್ತು ರೀಲರ್‌ಗಳು ಮಾರುಕಟ್ಟೆ ಹೊರಗೆ ವಹಿವಾಟು ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿ, ಎಲ್ಲಾ ವ್ಯಾಪಾರವೂ ಅಧಿಕೃತ ಹರಾಜು ವ್ಯವಸ್ಥೆಯಲ್ಲಿಯೇ ನಡೆಯಬೇಕೆಂದು ಮನವಿ ಮಾಡಿದರು.
ಮಳ್ಳೂರು ಶಿವಣ್ಣ ಅವರು “ಇ-ಹರಾಜು ಪದ್ದತಿಯಿಂದ ರೈತರು ಮತ್ತು ರೀಲರ್‌ಗಳು ಎರಡೂ ಪಕ್ಷಗಳು ಲಾಭ ಪಡೆಯುತ್ತಿವೆ. ಈ ವ್ಯವಸ್ಥೆ ವಿರುದ್ದ ಅನಾವಶ್ಯಕ ಅಪಪ್ರಚಾರ ಮಾಡಬಾರದು,” ಎಂದು ಹೇಳಿದರು.
ಸಭೆಯಲ್ಲಿ ಪ್ರಗತಿಪರ ರೈತರು ಹಿತ್ತಲಹಳ್ಳಿ ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಉಪ ನಿರ್ದೇಶಕ ಉಮೇಶ್, ಸಹಾಯಕ ನಿರ್ದೇಶಕ ಕೆ. ತಿಮ್ಮರಾಜು, ಅಕ್ಮಲ್ ಪಾಷ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.