Home News ಆರೆಸ್ಸೆಸ್ ನಿಷೇಧದ ಕಾಂಗ್ರೆಸ್ ಕ್ರಮ ವ್ಯರ್ಥ; ಜನರಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸಿದೆ: ಛಲವಾದಿ ನಾರಾಯಣಸ್ವಾಮಿ

ಆರೆಸ್ಸೆಸ್ ನಿಷೇಧದ ಕಾಂಗ್ರೆಸ್ ಕ್ರಮ ವ್ಯರ್ಥ; ಜನರಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸಿದೆ: ಛಲವಾದಿ ನಾರಾಯಣಸ್ವಾಮಿ

0
Sidlaghatta RSS 100 Years Marchpast

Sidlaghatta, chikkaballapur : “ಆರೆಸ್ಸೆಸ್ ಯಾವುದೇ ನೋಂದಾಯಿತ ಸಂಘವಲ್ಲ, ಸದಸ್ಯತ್ವ ನೋಂದಣಿ ಇಲ್ಲ, ದೇಣಿಗೆ ಸಂಗ್ರಹಿಸುವುದೂ ಇಲ್ಲ. ಕೇವಲ ದೇಶಪ್ರೇಮದ ತತ್ವವನ್ನು ಅನುಸರಿಸುವ ಸಂಘಟನೆಯನ್ನು ನಿಷೇಧಿಸಲು ಕಾಂಗ್ರೆಸ್ ಮುಂದಾಗಿರುವುದು ಅಸಾಧ್ಯವಾದ ವಿಚಾರ,” ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಶಿಡ್ಲಘಟ್ಟದಲ್ಲಿ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಶಿಡ್ಲಘಟ್ಟದಲ್ಲಿ ವಿಜಯದಶಮಿ ಪಥಸಂಚಲನ ನಡೆಯಿತು. ವಾಸವಿ ವಿದ್ಯಾ ಸಂಸ್ಥೆಯಿಂದ ಆರಂಭವಾದ ಪಥಸಂಚಲನ ಕೋಟೆ ವೃತ್ತ, ಹೂವಿನ ವೃತ್ತ, ನಗಾರ್ತಪೇಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಶಿಸ್ತಿನ ಸಾಲಿನಲ್ಲಿ ಕರ ಹಿಡಿದ ನೂರಾರು ಸ್ವಯಂಸೇವಕರು ಭಾರತಮಾತೆಯ ಭಾವಚಿತ್ರದ ಹಿಂದೆ ಹೆಜ್ಜೆಯಿಟ್ಟು ಸಾಗಿದರೆ, ನಾಗರಿಕರು ರಸ್ತೆ ಬದಿಯಲ್ಲಿ ನಿಂತು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ವಿವಿಧ ಸಂಘಟನೆಗಳ ಮುಖಂಡರು, ಶಾಲಾ ಮಕ್ಕಳು ಸಹ ಪಥಸಂಚಲನದಲ್ಲಿ ಭಾಗವಹಿಸಿದರು.

ಪಥಸಂಚಲನದ ಬಳಿಕ ಬಿಜೆಪಿ ಸೇವಾ ಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ಕಾಂಗ್ರೆಸ್ ಪಕ್ಷ ಆರೆಸ್ಸೆಸ್ ನಿಷೇಧದ ಮಾತು ಆರಂಭಿಸಿದ ಬಳಿಕ ದೇಶದಲ್ಲಿ ಆರೆಸ್ಸೆಸ್ ಸದಸ್ಯರ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಹೆಚ್ಚಿದೆ. ಅದಕ್ಕೆ ಕಾಂಗ್ರೆಸ್‌ಗೆ ಅಭಿನಂದನೆ ಸಲ್ಲಿಸಬೇಕು,” ಎಂದು ವ್ಯಂಗ್ಯವಾಡಿದರು.

ಅವರು ಮುಂದುವರಿದು, “ಆರೆಸ್ಸೆಸ್ ನೋಂದಾಯಿತ ಸಂಘವಲ್ಲದಿದ್ದಾಗ ನಿಷೇಧದ ಪ್ರಶ್ನೆಯೇ ಬರದು. ಇದನ್ನು ಅರಿಯದ ಕಾಂಗ್ರೆಸ್ ನಾಯಕರಿಗೆ ಮೂಲಭೂತ ಜ್ಞಾನವೇ ಇಲ್ಲ,” ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ಹೋರಾಟದ ಹೆಸರಿನಲ್ಲಿ ತಾವೇ ರಾಜಕೀಯ ತಪ್ಪು ಮಾಡಿಕೊಂಡಿದೆ, ಎಂದು ಅವರು ಆರೋಪಿಸಿದರು. “ಪಥಸಂಚಲನದಲ್ಲಿ ಹಿಂದಿನ ವರ್ಷ 300 ರಿಂದ 500 ಮಂದಿ ಭಾಗವಹಿಸುತ್ತಿದ್ದರೆ, ಈಗ 5,000 ರಿಂದ 10,000 ಜನರು ಭಾಗವಹಿಸುತ್ತಿದ್ದಾರೆ — ಇದಕ್ಕೆ ಕಾಂಗ್ರೆಸ್ ನಿಷೇಧದ ಹೇಳಿಕೆಯೇ ಕಾರಣ,” ಎಂದು ಹೇಳಿದರು.

ನಾರಾಯಣಸ್ವಾಮಿ ಅವರು, “ಸರ್ಕಾರ ಸಭೆ, ಸಮಾರಂಭಗಳಿಗೆ ಪೂರ್ವಾನುಮತಿ ಕಡ್ಡಾಯವೆಂದು ಹೇಳಿ, ಪರೋಕ್ಷವಾಗಿ ಪ್ರಧಾನಿ ಮೋದಿ ಅವರ ‘ಒಂದು ದೇಶ, ಒಂದು ಕಾನೂನು’ ತತ್ವವನ್ನು ಬೆಂಬಲಿಸಿದೆ. ಈಗ ಮುಸ್ಲಿಂ ಸಮುದಾಯದ ಹಬ್ಬಗಳಿಗೂ ಇದೇ ನಿಯಮ ಅನ್ವಯವಾಗಲಿದೆ,” ಎಂದರು.

ಅವರು 1975ರ ಎಮರ್ಜೆನ್ಸಿ ಆಡಳಿತವನ್ನು ನೆನಪಿಸುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ, “ಜನರು ಅವರ ಕೆಲಸಕ್ಕೆ ಶೀಘ್ರದಲ್ಲೇ ಉತ್ತರ ಕೊಡುತ್ತಾರೆ,” ಎಂದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version