
Ganganahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ಶಿಲಾ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ವಿವಿಧ ಧಾರ್ಮಿಕ ವಿಧಿವಿಧಾನಗಳಿಗೆ ಶುಕ್ರವಾರ ನೂತನ ಶಿಲಾ ವಿಗ್ರಹದ ಪ್ರತಿಷ್ಠಾಪನೆಯೊಂದಿಗೆ ಮಹಾಸಂಗಮ ಲಭಿಸಿತು. ಗ್ರಾಮಸ್ಥರು ಮತ್ತು ದಾನಿಗಳ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಸುಂದರ ಕಲ್ಲಿನ ದೇವಾಲಯವು ಈಗ ಗ್ರಾಮದ ಭಕ್ತಿ ಕೇಂದ್ರವಾಗಿ ಕಂಗೊಳಿಸುತ್ತಿದೆ.
ತಿಷ್ಠಾಪನಾ ಮಹೋತ್ಸವದ ಅಂಗವಾಗಿ ಕಳೆದ ಐದು ದಿನಗಳಿಂದಲೂ ಗಣಪತಿ ಪೂಜೆ, ಪುಣ್ಯಾಹವಾಚನ, ನಾನಾ ಹೋಮ-ಹವನಗಳು ನಡೆದವು. ಶುಕ್ರವಾರ ಬೆಳಿಗ್ಗೆ ನೂತನ ಶಿಲಾ ವಿಗ್ರಹಕ್ಕೆ ಹೂವಿನ ವಿಶೇಷ ಅಲಂಕಾರ ಮಾಡಿ, ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಅಪಾರ ಭಕ್ತ ಸಮೂಹಕ್ಕೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮದ ಮುಖಂಡ ವೆಂಕಟೇಶಪ್ಪ ಮಾತನಾಡಿ, “ಗ್ರಾಮಸ್ಥರೆಲ್ಲರೂ ಒಂದಾಗಿ ದಾನಿಗಳ ನೆರವಿನಿಂದ ಈ ಪುರಾತನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದೇವೆ. ಸಂಪೂರ್ಣ ಶಿಲ್ಪಕಲೆಯಿಂದ ಕೂಡಿದ ಕಲ್ಲಿನ ಕಟ್ಟಡ ಮತ್ತು ಆಕರ್ಷಕ ಶಿಖರವು ದೇವಾಲಯದ ಮೆರುಗನ್ನು ಹೆಚ್ಚಿಸಿದೆ. ತಾಯಿಯ ಕೃಪೆ ಎಲ್ಲರ ಮೇಲೆ ಇರಲಿ,” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ. ಮುನಿಯಪ್ಪ, ಮಾಜಿ ಶಾಸಕ ಎಂ. ರಾಜಣ್ಣ, ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ದರ್ಶನ ಪಡೆದರು. ರಾತ್ರಿ ನಡೆದ ಯಕ್ಷಗಾನ ಪ್ರದರ್ಶನವು ಭಕ್ತರ ಗಮನ ಸೆಳೆಯಿತು.