Home News ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದಲ್ಲಿ ಪರಿಸರ ಪ್ರೇಮ ಕುರಿತು ಚಕೋರ ಉಪನ್ಯಾಸ

ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದಲ್ಲಿ ಪರಿಸರ ಪ್ರೇಮ ಕುರಿತು ಚಕೋರ ಉಪನ್ಯಾಸ

0
Sidlaghatta Poornachandra Tejaswi Literature Seminar Appegowdanahalli School

Sidlaghatta : ಪರಿಸರ ಸಂರಕ್ಷಣೆಯನ್ನು ಬದುಕಿನ ಧರ್ಮವನ್ನಾಗಿ ಅಳವಡಿಸಿಕೊಳ್ಳುವ ಸಂದೇಶವನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಅಪರೂಪದ ಲೇಖಕರಾಗಿದ್ದಾರೆ ಎಂದು ಯುವ ಗಾಯಕ ಸೊರಪಲ್ಲಿ ಚಂದ್ರಶೇಖರ್ ಹೇಳಿದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ “ಚಕೋರ” ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ “ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದಲ್ಲಿ ಪರಿಸರ ಪ್ರೇಮ” ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೂರ್ಣಚಂದ್ರ ತೇಜಸ್ವಿಯವರು ಕಾಡು, ಕಣಿವೆ, ಪ್ರಾಣಿ–ಪಕ್ಷಿಗಳು, ಕೀಟಗಳು ಹಾಗೂ ಜೀವವೈವಿಧ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು, ಪ್ರಕೃತಿಯೊಂದಿಗೆ ಬೆರೆತು ಬದುಕಿದ ಲೇಖಕರಾಗಿದ್ದರು. ಕಾಡಿನಲ್ಲಿ ಸಂಚರಿಸಿ ಕೀಟಗಳು, ಸರಿಸೃಪಗಳು ಸೇರಿದಂತೆ ವಿವಿಧ ಜೀವಿಗಳ ಜೀವನಕ್ರಮವನ್ನು ಅಧ್ಯಯನ ಮಾಡಿ ಛಾಯಾಗ್ರಹಣದ ಮೂಲಕ ದಾಖಲಿಸುವುದರ ಜೊತೆಗೆ ತಮ್ಮ ಸಾಹಿತ್ಯದಲ್ಲೂ ಅದನ್ನು ಜೀವಂತವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ಅರಣ್ಯ ನಿರ್ದಯ ಕಡಿತ, ಕಾಡುಗಳ ನಾಶ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಅತಿಯಾದ ಶೋಷಣೆಯನ್ನು ತೇಜಸ್ವಿಯವರು ತಮ್ಮ ಕೃತಿಗಳಲ್ಲಿ ತೀವ್ರವಾಗಿ ವಿರೋಧಿಸಿದ್ದಾರೆ. ಪರಿಸರ ಸಂರಕ್ಷಣೆ ಎಂದರೆ ಕೇವಲ ಭಾಷಣ ಅಥವಾ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಪ್ರತಿಯೊಬ್ಬರೂ ಬದುಕಿನ ಧರ್ಮವಾಗಬೇಕು ಎಂಬ ಸಂದೇಶವನ್ನು ಅವರು ತಮ್ಮ ಸಾಹಿತ್ಯದ ಮೂಲಕ ಸಾರಿದ್ದಾರೆ ಎಂದು ತಿಳಿಸಿದರು.

ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ ಮಾತನಾಡಿ, ಪೂರ್ಣಚಂದ್ರ ತೇಜಸ್ವಿಯವರು ಪ್ರಕೃತಿಯನ್ನು ಕೇವಲ ಬದುಕಿನ ಭಾಗವೆಂದು ನೋಡದೆ, “ನಾವು ಪ್ರಕೃತಿಯ ಭಾಗ” ಎಂಬ ಚಿಂತನೆಗೆ ತಮ್ಮ ಸಾಹಿತ್ಯದಲ್ಲಿ ಒತ್ತು ನೀಡಿದ್ದಾರೆ. ಅವರ ಅನೇಕ ಕೃತಿಗಳು ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತಿವೆ. ಹಿಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜ್ಞಾನವರ್ಧನೆಗಾಗಿ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ “ಚಕೋರ” ಜಿಲ್ಲಾ ಸಂಚಾಲಕ ಪಾತಮುತ್ತಕಹಳ್ಳಿ ಚಲಪತಿಗೌಡ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ. ತ್ಯಾಗರಾಜ್, ಶಾಸನ ತಜ್ಞ ಧನಪಾಲ್, ವಿದ್ಯಾರ್ಥಿನಿ ಅಶ್ವಿನಿ, ಉಪಪ್ರಾಂಶುಪಾಲ ಮುರಳೀಧರ, ಶಿಕ್ಷಕರಾದ ಶಶಿದೀಪಿಕಾ, ತ್ರಿವೇಣಿ, ಎಲ್ಲಪ್ಪ ಗದ್ದನಕೇರಿ, ಸಿದ್ದು ಹುಣಸೀಕಟ್ಟಿ, ರಾಮಪ್ಪ, ಸಿದ್ದಪ್ಪ ಶಿವರಾಯ್, ನರೇಶ್, ಸಹನಾ, ಶ್ರೀಲಕ್ಷ್ಮಿ ಹಾಜರಿದ್ದರು.

In English: At a “Chakora” literature seminar organised by the Karnataka Sahitya Academy at the Indira Gandhi residential school in Appegowdanahalli, Sidlaghatta taluk, young singer Sorapalli Chandrashekhar spoke on the environmental themes in Poornachandra Tejaswi’s writing, calling him a rare Kannada author who conveyed conservation as a way of life rather than mere rhetoric. Students who answered quiz questions correctly were given books as prizes.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

Exit mobile version