
Sidlaghatta : ಶಿಡ್ಲಘಟ್ಟ ನಗರದ ಚೀಮುಲ್ ಶಿಬಿರ ಕಚೇರಿಯಲ್ಲಿ 2026-27ನೇ ಸಾಲಿನ ಗುಂಪು ರಾಸು ವಿಮೆ ಯೋಜನೆಯಡಿ 22 ಮಂದಿ ಹೈನುಗಾರರಿಗೆ ಒಟ್ಟು ₹12.50 ಲಕ್ಷ ಮೊತ್ತದ ಪರಿಹಾರ ಚೆಕ್‌ಗಳನ್ನು ಶನಿವಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಚೀಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, “ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದೆ. ಹೈನುಗಾರರಿಗೆ ಅನಿರೀಕ್ಷಿತ ನಷ್ಟ ಉಂಟಾದಾಗ ಗುಂಪು ರಾಸು ವಿಮೆ ಯೋಜನೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಹಾಲಿನ ಖರೀದಿ ದರ ಸೇರಿದಂತೆ ಇಲಾಖೆಯ ಎಲ್ಲ ಕಲ್ಯಾಣ ಯೋಜನೆಗಳ ಸದುಪಯೋಗ ರೈತರು ಪಡೆದುಕೊಳ್ಳಬೇಕು” ಎಂದು ಹೇಳಿದರು.
ಚೀಮುಲ್ ನಿರ್ದೇಶಕ ಹುಜುಗೂರು ರಾಮಣ್ಣ ಮಾತನಾಡಿ, “ಹೈನುಗಾರರು ಗುಣಮಟ್ಟದ ಹೈನುಗಾರಿಕೆಗೆ ಒತ್ತು ನೀಡುವ ಜೊತೆಗೆ ಪಶುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಚೀಮುಲ್ ಹೈನುಗಾರರ ಹಿತಾಸಕ್ತಿಗೆ ಬದ್ಧವಾಗಿದ್ದು, ವಿವಿಧ ಯೋಜನೆಗಳ ಮೂಲಕ ಅವರಿಗೆ ಅಗತ್ಯ ನೆರವು ನೀಡುತ್ತಿದೆ” ಎಂದು ತಿಳಿಸಿದರು.
ಚೀಮುಲ್ ಶಿಬಿರ ಉಪವ್ಯವಸ್ಥಾಪಕ ಡಾ. ರವಿಕಿರಣ್ ಮಾತನಾಡಿ, ಹೈನುಗಾರರು ವಿಮೆ ಸೇರಿದಂತೆ ಸರ್ಕಾರ ಮತ್ತು ಚೀಮುಲ್ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೈನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಸಹಕಾರಿ ಯೂನಿಯನ್ ನಿರ್ದೇಶಕ ಅಂಬರೀಷ್, ವಿಸ್ತರಣಾಧಿಕಾರಿಗಳಾದ ಜಯಚಂದ್ರ, ನರಸಿಂಹಯ್ಯ, ಸತ್ಯನಾರಾಯಣ, ಮಂಜುನಾಥ್, ಚೀಮುಲ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೈನುಗಾರರು ಹಾಜರಿದ್ದರು.
In English: At the Cheemul camp office in Sidlaghatta, compensation cheques totalling ₹12.50 lakh were distributed to 22 dairy farmers under the 2026-27 group cattle insurance scheme. Cheemul officials said the scheme provides financial security to dairy farmers against unexpected livestock losses and urged them to make full use of insurance and other welfare schemes.