
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ತಾಲ್ಲೂಕಿನ ಕುಂದಲಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಬ್ಲೂಡು ಉಪಕೇಂದ್ರವನ್ನು ಸಂಪೂರ್ಣ ಪಿಂಕ್ ಬೂತ್ ನ ಕೋವಿಡ್ ಲಸಿಕಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಈ ಕೇಂದ್ರದಲ್ಲಿ ಲಸಿಕೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳೆಲ್ಲ ಮಹಿಳೆಯರೇ ಆಗಿದ್ದು ಪಿಂಕ್ ಡ್ರೆಸ್ ಧರಿಸಿಕೊಂಡಿದ್ದರು; ಈ ಪಿಂಕ್ ಬೂತ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ಎಸ್.ಪಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್, ಇಒ ಚಂದ್ರಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಭೇಟಿ ನೀಡಿದ್ದರು.
ಭೇಟಿ ನೀಡಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ ಅವರು, ಈ ಪಿಂಕ್ ಬೂತ್‍ಗಳನ್ನು ನಾವು ಪ್ರತ್ಯೇಕವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಕಾಣುತ್ತೇವೆ; ಆದರೆ ಈ ಕೋವಿಡ್ ಸಂದರ್ಭದಲ್ಲಿ ಲಸಿಕೆ ನೀಡುವ ಸಲುವಾಗಿ ಪಿಂಕ್ ಬೂತ್ ಕಲ್ಪನೆಯು ಮಹತ್ವದ್ದಾಗಿದೆ. ಇದರ ಉದ್ದೇಶ ಎಂದರೆ ಮಹಿಳೆಯರು ತಮ್ಮ ಕೆಲಸವನ್ನು ಯಾವ ಕ್ಷೇತ್ರದಲ್ಲೂ ಸಹ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬಲ್ಲರು ಎಂಬುದಾಗಿದೆ. ಅಲ್ಲದೇ ಎಲ್ಲಾ ಕೆಲಸ ಕಾರ್ಯಗಳು ಮಹಿಳೆಯರೇ ಮಾಡಿರುವುದು ಎಂದು ಸಾಂಕೇತಿಕವಾಗಿ ಗುರುತಿಸಿಕೊಳ್ಳಲು ಈ ಪಿಂಕ್ ಬೂತಿನ ಉದ್ದೇಶವಾಗಿದೆ ಎಂದರು.
ಕೋವಿಡ್ ಲಸಿಕೆಯನ್ನು ಜಿಲ್ಲೆಯ ಎಲ್ಲಾ ಅರ್ಹ ನಾಗರಿಕರು ಪಡೆದುಕೊಳ್ಳಬೇಕು. ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ನುರಿತ ಸಿಬ್ಬಂದಿ ವರ್ಗದವರೊಂದಿಗೆ ವೈದ್ಯಕೀಯ ತಂಡ ಅಗತ್ಯ ಔಷಧಿಗಳೊಂದಿಗೆ ಸಿದ್ದತೆಯಲ್ಲಿ ಇರುತ್ತದೆ ಎಂದು ತಿಳಿಸಿದರು.