
Sidlaghatta : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿತ್ತು.
In English: The Shri Kshetra Dharmasthala Grama Abhivrudhi Yojane’s BC Trust organised a collective Varamahalakshmi puja and religious meeting at Sri Vasavi Kalyana Mantapa in Sidlaghatta, bringing together hundreds of women from self-help groups for the Varamahalakshmi festival. Speakers highlighted the scheme’s work on women’s empowerment, financial literacy and rural development through its Jnana Vikasa Kendras.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಮಹದೇವ ಸ್ವಾಮಿಗಳು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಜನರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಜ್ಞಾನವಿಕಾಸ ಕೇಂದ್ರಗಳ ಮೂಲಕ ಮಹಿಳೆಯರಿಗೆ ಆರೋಗ್ಯ, ಶಿಕ್ಷಣ, ಕುಟುಂಬ ನಿರ್ವಹಣೆ, ಕಾನೂನು ಅರಿವು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮಹಿಳಾ ಸಬಲೀಕರಣದ ಜೊತೆಗೆ ಕುಟುಂಬದಲ್ಲಿ ಪ್ರೀತಿ, ಪರಸ್ಪರ ಗೌರವ ಮತ್ತು ಸಾಮರಸ್ಯವನ್ನು ಬೆಳೆಸುವ ಮೂಲಕ ಉತ್ತಮ ಕುಟುಂಬ ಹಾಗೂ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಯೋಜನೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಜನಾಧಿಕಾರಿ ಪ್ರಕಾಶ್ ಅವರು, ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಗ್ರಾಮಾಭಿವೃದ್ಧಿಯ ಕನಸಿನ ಕೂಸಾಗಿ ಆರಂಭವಾದ ಯೋಜನೆ ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದೆ. ಗ್ರಾಮೀಣ ಪರಿವರ್ತನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸ ಭಾಷ್ಯ ಬರೆದಿದೆ ಎಂದು ಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳು ಹಾಗೂ ಜ್ಞಾನವಿಕಾಸ ಕೇಂದ್ರಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಒಗ್ಗೂಡಿಸಲಾಗುತ್ತಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಅದರ ಭಾಗವಾಗಿ ನೂರಾರು ಮಹಿಳೆಯರು ಒಂದೆಡೆ ಸೇರಿ ಸಾಮೂಹಿಕವಾಗಿ ಶ್ರೀ ವರಮಹಾಲಕ್ಷ್ಮಿ ವ್ರತ ಹಾಗೂ ಪೂಜೆಯನ್ನು ನೆರವೇರಿಸುತ್ತಿದ್ದಾರೆ ಎಂದರು.
ಶಿಡ್ಲಘಟ್ಟದ ಜನರ ಪ್ರಮುಖ ಜೀವನಾಧಾರವಾಗಿರುವ ರೇಷ್ಮೆ ಕ್ಷೇತ್ರದ ಅಭಿವೃದ್ಧಿಗೂ ಯೋಜನೆಯ ವತಿಯಿಂದ ವಿವಿಧ ರೀತಿಯ ಆರ್ಥಿಕ ಸಹಾಯ ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಕಾಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರು ಹಾಗೂ ಪ್ರಗತಿಪರ ಚಿಂತಕರಾದ ಹಿತ್ತಲಹಳ್ಳಿ ಸುರೇಶ್, ತ್ಯಾಗರಾಜ್, ಲಿಯೋ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರಗಳ ಸದಸ್ಯರು ಹಾಗೂ ನೂರಾರು ಮಹಿಳೆಯರು ಉಪಸ್ಥಿತರಿದ್ದರು.