
Sidlaghatta : ಎಚ್.ಎನ್. ವ್ಯಾಲಿ ಯೋಜನೆಯಡಿ ಕಾಲುವೆ ಮೂಲಕ ಹರಿಯುವ ನೀರನ್ನು ಮೋಟಾರ್ ಪಂಪ್ಗಳ ಮೂಲಕ ಅನಧಿಕೃತವಾಗಿ ಎತ್ತುವುದನ್ನು ತಡೆಯಲು ರಚಿಸಿರುವ ಟಾಸ್ಕ್ ಫೋರ್ಸ್ ಸಮಿತಿಯ ಕಾರ್ಯ ಕೇವಲ ಕಾಗದದ ಆದೇಶಕ್ಕೆ ಸೀಮಿತವಾಗದೆ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂದು ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
In English: Raita Sangha state working president Bhaktarahalli Byregowda has demanded strict enforcement of a newly-formed task force meant to stop illegal motor-pump lifting of HN Valley canal water, saying most tanks except Gowdanakere are not receiving water due to unauthorised lifting between Dibbur and the Sidlaghatta border. He also flagged unscientific gate placement and unauthorised tampering with lake gates as reasons several tanks remain unfilled.
ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿರುವ ಸಂಘದ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟದ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಯುವ ಮಾರ್ಗದಲ್ಲಿ ದಿಬ್ಬೂರಿನಿಂದ ಶಿಡ್ಲಘಟ್ಟ ಗಡಿಭಾಗದವರೆಗೆ ಹಲವೆಡೆ ಅನಧಿಕೃತವಾಗಿ ಮೋಟಾರ್ ಅಳವಡಿಸಿ ನೀರು ಎತ್ತಲಾಗುತ್ತಿದೆ. ಇದರಿಂದ ಗೌಡನಕೆರೆಯನ್ನು ಹೊರತುಪಡಿಸಿ ಬಹುತೇಕ ಕೆರೆಗಳಿಗೆ ಎಚ್.ಎನ್. ವ್ಯಾಲಿ ನೀರು ಹರಿಯುತ್ತಿಲ್ಲ” ಎಂದರು.
“ಈ ಕುರಿತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದ ಹಿನ್ನೆಲೆಯಲ್ಲಿ ಪೊಲೀಸ್, ಕಂದಾಯ, ಬೆಸ್ಕಾಂ, ತಾಲ್ಲೂಕು ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಿರುವುದು ಸ್ವಾಗತಾರ್ಹ. ತಂಡ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದರೆ ಉಳಿದ ಕೆರೆಗಳಿಗೂ ನೀರು ತಲುಪುವ ನಿರೀಕ್ಷೆಯಿದೆ” ಎಂದು ಹೇಳಿದರು.
ಅವೈಜ್ಞಾನಿಕ ಗೇಟ್ ಅಳವಡಿಕೆ
ಎಚ್.ಎನ್. ವ್ಯಾಲಿ ಯೋಜನೆಯಡಿ ಕೆರೆಯ ಶೇ 50ರಷ್ಟು ಸಾಮರ್ಥ್ಯ ತಲುಪುವ ಸ್ಥಳದಲ್ಲಿ ಗೇಟ್ ಅಳವಡಿಸಬೇಕಿದೆ. ಆದರೆ ಕೆಲವು ಕಡೆ ಶೇ 80–90ರಷ್ಟು ಸಾಮರ್ಥ್ಯದ ಹಂತದಲ್ಲಿ ಗೇಟ್ ಅಳವಡಿಸುತ್ತಿರುವುದರಿಂದ ಕೆರೆಗಳು ಅರ್ಧದಷ್ಟು ಕೂಡ ತುಂಬುತ್ತಿಲ್ಲ. ಯೋಜನೆಯ ನಿಯಮದಂತೆ ವೈಜ್ಞಾನಿಕವಾಗಿ ಗೇಟ್ಗಳನ್ನು ಅಳವಡಿಸಬೇಕು ಎಂದು ಅವರು ಆಗ್ರಹಿಸಿದರು.
ಯೋಜನೆಯ ಮೊದಲ ಹಂತದಲ್ಲಿ ತುಂಬಬೇಕಿದ್ದ ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳೇ ಇನ್ನೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಹಂತವನ್ನು ಘೋಷಿಸಿ, ಮೊದಲ ಹಂತದ ಅಮ್ಮನಕೆರೆ ಮೂಲಕ ಮೂರನೇ ಹಂತದ ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಮೊದಲ ಹಂತದ ಕೆರೆಯಲ್ಲೇ ನೀರಿಲ್ಲದಿದ್ದಾಗ ಮೂರನೇ ಹಂತದ ಕೆರೆಗಳಿಗೆ ನೀರು ಹೇಗೆ ಹರಿಯಲಿದೆ ಎಂಬುದನ್ನು ಅಧಿಕಾರಿಗಳು ರೈತರಿಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಕೆರೆಗಳಿಗೆ ಅಳವಡಿಸಿರುವ ಗೇಟ್ಗಳನ್ನು ಆಯಾ ಭಾಗದ ಕೆಲ ರೈತರು ತಮಗೆ ಬೇಕಾದಂತೆ ತಿರುಗಿಸುತ್ತಿರುವುದರಿಂದ ಕೊನೆಯ ಹಂತದ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆಯವರು ಗೇಟ್ಗಳನ್ನು ನಿರ್ವಹಿಸುವುದನ್ನು ತಡೆಯಬೇಕು. ಅನಧಿಕೃತವಾಗಿ ಗೇಟ್ಗಳನ್ನು ತಿರುಗಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಲುವೆ ಹಾಗೂ ಕೆರೆಗಳಲ್ಲಿ ಗಿಡಗಂಟಿ, ಪೊದೆಗಳು ಬೆಳೆದು ನೀರಿನ ಹರಿವಿಗೆ ಅಡ್ಡಿಯಾಗುತ್ತಿವೆ. ರೈತರು ಪ್ರತಿಭಟನೆ ನಡೆಸಿದಾಗ ಮಾತ್ರ ಸಾಂಕೇತಿಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಶಾಶ್ವತವಾಗಿ ಪೊದೆಗಳನ್ನು ತೆರವುಗೊಳಿಸಿ ಕೆರೆಯಿಂದ ಕೆರೆಗೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಸವರಾಜು, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಖಜಾಂಚಿ ದೇವರಾಜ್ ಹಾಗೂ ಬಚ್ಚೇಗೌಡ ಇದ್ದರು.