
Sidlaghatta : ಮಾದಕ ವಸ್ತುಗಳ ಸೇವನೆಯಿಂದ ಯುವಜನತೆ ದೂರವಿದ್ದು, ಆರೋಗ್ಯಕರ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ನಗರ ಠಾಣೆಯ ಪಿ.ಎಸ್.ಐ ಸುನಿಲ್ ಕುಮಾರ್ ಹೇಳಿದರು.
In English: Dolphin Degree College students staged street plays and dance performances at the taluk office, Kote Circle, and the KSRTC bus stand as part of a “Drug-Free India” awareness campaign, with city police PSI Sunil Kumar urging youth to stay away from substance abuse.
ಡಾಲ್ಫಿನ್ ಡಿಗ್ರಿ ಕಾಲೇಜು ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ “ಮಾದಕ ವಸ್ತುಗಳ ವ್ಯಸನಮುಕ್ತ ಭಾರತ” ಎಂಬ ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳು ನಗರದ ತಾಲ್ಲೂಕು ಕಚೇರಿ ಮುಂಭಾಗ, ಕೋಟೆ ಸರ್ಕಲ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಮತ್ತು ನೃತ್ಯದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಯುವಜನರ ಮೇಲೆ ಬೀರುವ ಸಾಮಾಜಿಕ ಹಾಗೂ ಆರೋಗ್ಯದ ಪರಿಣಾಮಗಳು ಮತ್ತು ವ್ಯಸನದಿಂದ ಹೊರಬರುವ ಅಗತ್ಯವನ್ನು ಬೀದಿ ನಾಟಕದ ಮೂಲಕ ವಿದ್ಯಾರ್ಥಿಗಳು ಮನಮುಟ್ಟುವಂತೆ ಪ್ರದರ್ಶಿಸಿದರು. ನೃತ್ಯದ ಮೂಲಕವೂ ವ್ಯಸನಮುಕ್ತ ಸಮಾಜ ನಿರ್ಮಾಣದ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರೇಡ್–2 ತಹಶೀಲ್ದಾರ್ ಮಂಜುನಾಥ್, “ಯುವಕರು ದೇಶದ ಭವಿಷ್ಯವಾಗಿದ್ದು, ಮಾದಕ ವಸ್ತುಗಳಂತಹ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಕಾರಿಯಾಗುತ್ತವೆ” ಎಂದರು.
ಮಾದಕ ವಸ್ತುಗಳ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, “ವ್ಯಸನಮುಕ್ತ ಭಾರತ–ಆರೋಗ್ಯಕರ ಭಾರತ” ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಡಾಲ್ಫಿನ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ. ಸುದರ್ಶನ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು, ಬಿಕಾಂ ಹಾಗೂ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಉತ್ಸಾಹಭರಿತ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.
ನೃತ್ಯರೂಪಕದಲ್ಲಿ ಮಾನ್ಯಶ್ರೀ, ಇಂದು, ಸಿಂಧು, ಮೇಘನಾ, ಅಕ್ಷಯ, ಗಂಗೋತ್ರಿ, ಚಾರುಲತಾ, ಶಾಲಿನಿ ಹಾಗೂ ವಂದನ ಭಾಗವಹಿಸಿದ್ದರು.
ಬೀದಿ ನಾಟಕದಲ್ಲಿ ಸಂಜನಾ, ಅಕ್ಷಯ್ ಕುಮಾರ್, ಧನುಷ್, ಕೀರ್ತನ್, ಶಶಿಕುಮಾರ್, ಸಾಯಿ ಚರಣ್, ಇಂದು, ಸಿಂಧು, ಮಾನ್ಯಶ್ರೀ ಹಾಗೂ ಮಧುಸೂದನ್ ಪಾಲ್ಗೊಂಡಿದ್ದರು.