Home News ಸ್ಥಳೀಯ ಅರಣ್ಯ ಬೀಜಗಳ ಸಂಗ್ರಹಣೆ ಕಾರ್ಯಕ್ರಮ

ಸ್ಥಳೀಯ ಅರಣ್ಯ ಬೀಜಗಳ ಸಂಗ್ರಹಣೆ ಕಾರ್ಯಕ್ರಮ

0
FES native tree seeds collection Program

Bashettahalli, Sidlaghatta : ಪ್ರಕೃತಿಯಲ್ಲಿ ನೈಸರ್ಗಿಕವಾಗಿ ನಡೆಯುವ ಹಲವಾರು ಜೀವಚಕ್ರ ಮತ್ತು ಪರಿಸರ ಪ್ರಕ್ರಿಯೆಗಳ ಫಲವಾಗಿ ಇಂದು ಮಾನವ ಜೀವನ ಸಮತೋಲನದಲ್ಲಿದೆ. ಆದರೆ ಅರಣ್ಯ ನಾಶ, ಮಣ್ಣಿನ ಸವಕಳಿ, ಜೀವ ವೈವಿಧ್ಯದ ಕುಸಿತ ಮತ್ತು ಹವಾಮಾನ ಬದಲಾವಣೆಗಳಂತಹ ಸವಾಲುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕಿದೆ ಎಂದು ಎಫ್‌ಇಎಸ್ ಸಂಸ್ಥೆಯ ಉಪ ಯೋಜನಾಧಿಕಾರಿ ಎಸ್.ಜಿ.ಗೋಪಿ ತಿಳಿಸಿದರು.

ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (FES) ಸಂಸ್ಥೆಯ ವತಿಯಿಂದ ತಾಲ್ಲೂಕಿನ ಬಶೆಟ್ಟಹಳ್ಳಿ ವ್ಯಾಪ್ತಿಯ ರಾಮಲಿಂಗೇಶ್ವರ ಬೆಟ್ಟದ ಸುತ್ತಮುತ್ತಲೂ ಹಮ್ಮಿಕೊಂಡಿದ್ದ ಸ್ಥಳೀಯ ಅರಣ್ಯ ಬೀಜಗಳ ಸಂಗ್ರಹಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಫ್‌ಇಎಸ್ ಸಂಸ್ಥೆ ಪ್ರತಿ ವರ್ಷದಂತೆ ಈ ವರ್ಷವೂ ಸ್ಥಳೀಯ ಅರಣ್ಯ ಬೀಜಗಳ ಸಂಗ್ರಹಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಂಗ್ರಹಿಸಲಾದ ಬೀಜಗಳನ್ನು ‘ಒನ್ ಪ್ಲಸ್ ತ್ರೀ’ ಮಾದರಿಯಡಿ ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಿದರು. 

ಈ ಮಾದರಿಯಲ್ಲಿ ಒಂದು ಸಸಿಯೊಂದಿಗೆ ಅದರ ಸುತ್ತಮುತ್ತ ಸ್ಥಳೀಯ ಬೀಜಗಳನ್ನು ಬಿತ್ತನೆ ಮಾಡುವುದರಿಂದ, ಯಾವುದಾದರೂ ಕಾರಣಗಳಿಂದ ನೆಟ್ಟ ಸಸಿ ನಾಶವಾದರೂ ಬೀಜಗಳಿಂದ ಹೊಸ ಮೊಳಕೆಗಳು ಬೆಳೆಯುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ನೈಸರ್ಗಿಕವಾಗಿ ಗಿಡಮರಗಳ ಪುನರುತ್ಥಾನ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಎಫ್‌ಇಎಸ್ ಸಂಸ್ಥೆಯ ಎನ್.ರಮೇಶ್ ಮಾತನಾಡಿ, ಸಮುದಾಯದ ಸಹಭಾಗಿತ್ವದೊಂದಿಗೆ ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಪುನರುಜ್ಜೀವನ, ಅರಣ್ಯ ಅಭಿವೃದ್ಧಿ ಹಾಗೂ ಸುಸ್ಥಿರ ಜೀವನಶೈಲಿಗೆ ಉತ್ತೇಜನ ನೀಡುವ ಹಲವಾರು ಕಾರ್ಯಕ್ರಮಗಳನ್ನು ಎಫ್‌ಇಎಸ್ ಸಂಸ್ಥೆಯು ನಿರಂತರವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು. 

ಈ ರೀತಿಯ ಕಾರ್ಯಕ್ರಮಗಳು ಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಹಸಿರು ಮತ್ತು ಸಮತೋಲನಯುತ ಪರಿಸರವನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಎಫ್‌ಇಎಸ್ ಸಂಸ್ಥೆಯ ಸಹಕಾರದೊಂದಿಗೆ ರಚಿಸಲಾದ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳಿಂದ ಸಾಮೂಹಿಕ ಆಸ್ತಿಗಳ ರಕ್ಷಣೆ, ನಿರ್ವಹಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಪರಿಸರ ಸಂರಕ್ಷಣೆ, ಅಭಿವೃದ್ಧಿ ಮತ್ತು ಸುಸ್ಥಿರ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.

ಇದೇ ವೇಳೆ ವಿವಿಧ ಕಾಲಮಾನಗಳಲ್ಲಿ ಲಭ್ಯವಾಗುವ ಅರಣ್ಯ ಬೀಜಗಳ ಕುರಿತು ಸಮುದಾಯದೊಂದಿಗೆ ಚರ್ಚಿಸಿ “ಬೀಜ ಕ್ಯಾಲೆಂಡರ್” ಸಿದ್ಧಪಡಿಸುವ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು. ಪ್ರತಿ ಋತುವಿನಲ್ಲಿ ದೊರೆಯುವ ಬೀಜಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಸಂಗ್ರಹಿಸಿ, ಸಂರಕ್ಷಿಸಿ ಪರಿಸರ ಪುನರ್ಜೀವನ ಕಾರ್ಯಗಳಲ್ಲಿ ಬಳಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳು, ಸಿಬ್ಬಂದಿ ವರ್ಗ, ಸಮುದಾಯದ ಪ್ರತಿನಿಧಿಗಳು ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳು ಸೇರಿದಂತೆ 30ಕ್ಕೂ ಹೆಚ್ಚು ಜನರು ಪ್ರಕೃತಿಯ ಮಧ್ಯೆ ಸಂಚರಿಸಿ ಈ ಭಾಗದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಮೋತಕ ಸೇರಿದಂತೆ ಹಲವಾರು ಸ್ಥಳೀಯ ಅರಣ್ಯ ಸಸ್ಯಗಳ ಬೀಜಗಳನ್ನು ಸಂಗ್ರಹಿಸಿದರು. ಒಟ್ಟು 12 ಚೀಲಗಳಷ್ಟು ಬೀಜಗಳನ್ನು ಸಂಗ್ರಹಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಗ್ರಾಮ ಮಟ್ಟದಲ್ಲಿಯೂ ಇಂತಹ ಪರಿಸರ ಪರ ಚಟುವಟಿಕೆಗಳನ್ನು ಕೈಗೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು. ಬೀಜ ಸಂಗ್ರಹಣೆಯ ಜೊತೆಗೆ ಪರಿಸರ ಶಿಕ್ಷಣ, ಸಮುದಾಯದ ಭಾಗವಹಿಸುವಿಕೆ ಮತ್ತು ಸ್ಥಳೀಯ ಜೀವ ವೈವಿಧ್ಯದ ಸಂರಕ್ಷಣೆ ಕುರಿತ ಚರ್ಚೆ ನಡೆಸಿದರು.

ಎಫ್‌ಇಎಸ್ ಸಂಸ್ಥೆಯ ಶ್ರೀಮತಿ ಲೀಲಾವತಿ, ವೈ.ನರಸಿಂಹಪ್ಪ, ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366


NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version