
Jangamakote Cross, Sidlaghatta: “ಹೆತ್ತವರು, ಅಕ್ಷರ ಕಲಿಸಿದ ಗುರುಗಳು ಮತ್ತು ಮಾರ್ಗದರ್ಶನ ನೀಡುವ ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ನಾವು ಬೆಳೆಸಿಕೊಳ್ಳಬೇಕು. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮೂಲಕ ಬಲಿಷ್ಠ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು,” ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿರುವ ಜ್ಞಾನ ಜ್ಯೋತಿ ಶಾಲೆಯಲ್ಲಿ ಗ್ರಾಮೀಣ ವಿದ್ಯಾಭಿವೃದ್ಧಿ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿ ದಿ.ಬಿ.ಎಂ.ಮೂರ್ತಿ ಅವರ 25ನೇ ವರ್ಷದ ಮಹಾಪ್ರಸ್ಥಾನದ ಅಂಗವಾಗಿ ಹಮ್ಮಿಕೊಂಡಿದ್ದ ಪುತ್ಥಳಿ ಅನಾವರಣ, ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“40 ವರ್ಷಗಳ ಹಿಂದೆಯೇ ಶಿಕ್ಷಣದ ಮಹತ್ವ ಅರಿತು, ಬಾಡಿಗೆ ಶೆಡ್‌ನಲ್ಲಿ ಶಾಲೆ ಆರಂಭಿಸಿ ಇಂದು ಸಾವಿರಾರು ಗ್ರಾಮೀಣ ಮಕ್ಕಳಿಗೆ ಜ್ಞಾನದಾಸೋಹ ಮಾಡುತ್ತಿರುವ ಬಿ.ಎಂ.ಮೂರ್ತಿ ಅವರ ದೂರದೃಷ್ಟಿ ಶ್ಲಾಘನೀಯ. ಅವರ ಈ ಸೇವೆಯನ್ನು ಅವರ ಪುತ್ರ ರಾಜೀವ್ ಕುಮಾರ್ ಮತ್ತು ಕುಟುಂಬಸ್ಥರು ನಿಸ್ವಾರ್ಥವಾಗಿ ಮುಂದುವರಿಸುತ್ತಿರುವುದು ಸಂತಸದ ವಿಷಯ,” ಎಂದು ಸ್ವಾಮೀಜಿ ಹರಸಿದರು.
ಶಿಕ್ಷಣವೇ ಬದುಕಿನ ಶಕ್ತಿ – ಡಾ.ಸಿ.ಎನ್.ಅಶ್ವಥ್ ನಾರಾಯಣ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, “ನಾವು ಜ್ಞಾನ ಆಧಾರಿತ ಶತಮಾನದಲ್ಲಿದ್ದೇವೆ. ಪರಿಪೂರ್ಣ ಬದುಕು ನಡೆಸಲು ಶಿಕ್ಷಣವೊಂದೇ ದಾರಿ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಈ ಭಾಗದಲ್ಲಿ ಆರಂಭಿಸಿರುವುದು ಶೈಕ್ಷಣಿಕ ಪ್ರಗತಿಗೆ ದೊಡ್ಡ ಕೊಡುಗೆಯಾಗಲಿದೆ,” ಎಂದರು.
ಎಐ (AI) ಕಾಲಕ್ಕೆ ಮಕ್ಕಳು ಸನ್ನದ್ಧರಾಗಲಿ – ಶರತ್ ಬಚ್ಚೇಗೌಡ: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, “ಈಗ ಪುಸ್ತಕಗಳಿಗಿಂತ ಹೆಚ್ಚಾಗಿ ಕೃತಕ ಬುದ್ಧಿಮತ್ತೆ (Artificial Intelligence) ಜಮಾನ ಆರಂಭವಾಗಿದೆ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಎಐ ಶಿಕ್ಷಣಕ್ಕೆ ಒಗ್ಗಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬಿ.ಎಂ.ಮೂರ್ತಿ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮಾಡಲಾಯಿತು. ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು. ನೇತ್ರ ತಪಾಸಣೆ, ರಕ್ತದಾನ ಶಿಬಿರ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು.