
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಉಳಿದ ಏಳು ಕೆರೆಗಳಿಗೆ ಎಚ್.ಎನ್. ವ್ಯಾಲಿ (HN Valley) ಯೋಜನೆಯ ನೀರನ್ನು ತಕ್ಷಣ ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಕೆ.ಎಸ್. ಪುಟ್ಟಣ್ಣಯ್ಯ ಬಣ)ದ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಜಿ. ಪ್ರಭು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದರು.
In English: Leaders of the Karnataka Rajya Raitha Sangha (KS Puttannaiah faction) met Chikkaballapura District Collector G. Prabhu on Tuesday, demanding immediate release of HN Valley project water to the seven Sidlaghatta taluk tanks still waiting for it — including Bandemma Kere and Amma Kere. Of nine tanks due water in the project’s first phase, only two have received a token supply so far, and even that has now been stopped for four days, farmers said, causing drinking-water and cattle-water shortages in rural areas.
ರೈತರ ಆಗ್ರಹವೇನು?
ಈ ಸಂಬಂಧ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಟಿ. ಲಕ್ಷ್ಮೀನಾರಾಯಣ ರೆಡ್ಡಿ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷ ಕೋಟೆ ಚನ್ನೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜಿ ಸೇರಿದಂತೆ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಜಿ. ಪ್ರಭು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. “ಎಚ್.ಎನ್. ವ್ಯಾಲಿ ಯೋಜನೆಯ ಮೊದಲ ಹಂತದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಒಂಬತ್ತು ಕೆರೆಗಳಿಗೆ ನೀರು ಹರಿಸಬೇಕಿತ್ತು. ಆದರೆ ಎರಡು ಕೆರೆಗಳಿಗೆ ಮಾತ್ರ ನಾಮಮಾತ್ರವಾಗಿ ನೀರು ಹರಿಸಲಾಗಿದೆ. ಉಳಿದ ಏಳು ಕೆರೆಗಳಿಗೆ ಇದುವರೆಗೆ ನೀರು ಹರಿಸಿಲ್ಲ. ಇದೀಗ ನಾಲ್ಕು ದಿನಗಳಿಂದ ಬರುತ್ತಿದ್ದ ನೀರನ್ನೂ ಸ್ಥಗಿತಗೊಳಿಸಲಾಗಿದೆ” ಎಂದು ಮುಖಂಡರು ದೂರಿದರು.
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಆದ್ದರಿಂದ ಉಳಿದ ಏಳು ಕೆರೆಗಳಿಗೆ, ವಿಶೇಷವಾಗಿ ಬಂಡೆಮ್ಮ ಕೆರೆ ಮತ್ತು ಅಮ್ಮನ ಕೆರೆಗೆ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಏನಾಗಿತ್ತು?
ಈ ಹಿಂದೆ ಇದೇ ಬೇಡಿಕೆಗೆ ಆಗ್ರಹಿಸಿ ಏಳನೇ ತಾರೀಖಿನಂದು ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರಕ್ಕೆ ಬೃಹತ್ ಬೈಕ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಆಗ ಜಿಲ್ಲಾಧಿಕಾರಿ 15 ದಿನಗಳ ಕಾಲಾವಕಾಶ ಕೋರಿದ್ದರು. ಇದೀಗ ಮತ್ತೊಮ್ಮೆ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ವಿಷ್ಣು ಕಾಮತ್ ಅವರಿಗೆ ಮನವಿ ಸಲ್ಲಿಸಿ, ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕ್ರೀಡಾಪಟು ಜಯಂತಿ ಗ್ರಾಮ ನಾರಾಯಣಸ್ವಾಮಿ, ಬಶೆಟ್ಟಹಳ್ಳಿ ಹೋಬಳಿ ಅಧ್ಯಕ್ಷ ದ್ಯಾವಪ್ಪ, ಶಂಕರ್, ನಾರಾಯಣ, ನಾಗೇಶ್, ನಾಗರಾಜ್, ನಾರಾಯಣಸ್ವಾಮಿ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.