
Sidlaghatta : ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಉದ್ದೇಶದಿಂದ ತಾಲೂಕಿನಲ್ಲಿ ಹಂತ ಹಂತವಾಗಿ ಪ್ರಜಾಸೇವೆ ಆಂದೋಲನ ಆಯೋಜಿಸಲಾಗುತ್ತಿದೆ ಎಂದು ತಹಶೀಲ್ದಾರ್ ಗಗನಸಿಂಧು ಎನ್. ತಿಳಿಸಿದರು.
In English: Tahsildar Gaganasindhu N. announced the second Janaspandana grievance camp will be held September 12 at Bashettihalli hobli’s K.P.S.C. school, after the first session at Sadali hobli drew 175 applications, mostly revenue-related requests on road encroachment, cultivation certificates, and Form 53/57.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.12ರಂದು (ಶನಿವಾರ) ಬಶೆಟ್ಟಿಹಳ್ಳಿ ಹೋಬಳಿಯ ಕೆ.ಪಿ.ಎಸ್.ಸಿ ಶಾಲೆಯಲ್ಲಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ವಾರ ಸಾದಲಿ ಹೋಬಳಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 175 ಅರ್ಜಿಗಳು ಸ್ವೀಕೃತವಾಗಿವೆ ಎಂದರು.
ಸಾದಲಿ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸುಮಾರು 80ರಿಂದ 90 ಅರ್ಜಿಗಳು ಬಂದಿವೆ. ದಾರಿ ಒತ್ತುವರಿ, ಸಾಗುವಳಿ ಚೀಟಿ, ನಮೂನೆ 53 ಮತ್ತು 57 ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಉಳಿದ ಅರ್ಜಿಗಳು ವಿವಿಧ ಇಲಾಖೆಗಳ ವ್ಯಾಪ್ತಿಗೆ ಸೇರಿವೆ ಎಂದು ಹೇಳಿದರು.
ತಾಲೂಕಿನ ಎಲ್ಲ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆ ಅಥವಾ ಮನವಿಯನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ಹಾಗೂ ಸಂಪೂರ್ಣ ವಿವರಗಳೊಂದಿಗೆ ನಮೂದಿಸಬೇಕು. ಅಪೂರ್ಣ ಮಾಹಿತಿ ನೀಡುವುದರಿಂದ ಅರ್ಜಿಗಳ ವಿಲೇವಾರಿಗೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸ್ವೀಕರಿಸುವ ಅರ್ಜಿಗಳನ್ನು ಐ.ಪಿ.ಜಿ.ಆರ್.ಎಸ್. (IPGRS) ಪೋರ್ಟಲ್ನಲ್ಲಿ ದಾಖಲಿಸಿ, ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುವುದು. ಸ್ಥಳದಲ್ಲಿಯೇ ಪರಿಹರಿಸಬಹುದಾದ ತುರ್ತು ಸಮಸ್ಯೆಗಳಿಗೆ ವೇದಿಕೆಯಲ್ಲೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅರ್ಜಿಗಳ ವಿಲೇವಾರಿ ಪ್ರಗತಿಯನ್ನು ಪರಿಶೀಲಿಸಲು ಪ್ರತಿ ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಲಾಗುವುದು. ಸರ್ಕಾರದ ಆದೇಶದಂತೆ ಅರ್ಜಿಗಳನ್ನು ಗರಿಷ್ಠ 30 ದಿನಗಳೊಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಜನಸ್ಪಂದನ ಕಾರ್ಯಕ್ರಮವನ್ನು ಕೇವಲ ಅರ್ಜಿ ಸ್ವೀಕರಿಸುವ ಕಾರ್ಯಕ್ರಮವಾಗಿ ಪರಿಗಣಿಸದೆ, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪರಿಣಾಮಕಾರಿ ವೇದಿಕೆಯನ್ನಾಗಿ ರೂಪಿಸಲಾಗುವುದು. ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು.