
Sidlaghatta : ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಸಿದರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿ ಸಾಧ್ಯವಾಗಲಿದೆ. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ದಿಬ್ಬೂರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಪಿ. ನಾಗರಾಜು ಹೇಳಿದರು.
In English: Dibburahalli’s milk producers’ cooperative — the taluk’s top-performing society — reported ₹4.5 lakh income and about ₹2 crore in assets for 2025-26 at its annual meeting, distributing a ₹4.50-per-₹100 bonus to members even as CHIMUL officials flagged a drought-driven dip in milk production district-wide.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ದಿಬ್ಬೂರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025–26ನೇ ಸಾಲಿನ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“1998ರಲ್ಲಿ ಸಂಘದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದು, ಮಧ್ಯದಲ್ಲಿ ಮೂರು ವರ್ಷ ಹೊರತುಪಡಿಸಿದರೆ 28 ವರ್ಷಗಳಿಂದ ಸದಸ್ಯರು ಹಾಗೂ ನಿರ್ದೇಶಕರ ಸಹಕಾರದಿಂದ ಸಂಘದ ಆಡಳಿತ ನಡೆಸಿಕೊಂಡು ಬಂದಿದ್ದೇನೆ. ನನ್ನ ಅವಧಿಯಲ್ಲಿ ಸಂಘದ ಹೆಸರಿನಲ್ಲಿ 6 ಗುಂಟೆ ಜಮೀನನ್ನು ₹90 ಸಾವಿರಕ್ಕೆ ಖರೀದಿಸಲಾಗಿದೆ. ಸಂಘಕ್ಕೆ ಆದಾಯದ ಮೂಲ ಕಲ್ಪಿಸುವ ಉದ್ದೇಶದಿಂದ 10 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅವುಗಳಿಂದ ವಾರ್ಷಿಕ ₹1.80 ಲಕ್ಷ ಬಾಡಿಗೆ ಆದಾಯ ಬರುತ್ತಿದೆ” ಎಂದರು.
“ಸಂಘದ ಹೆಸರಿನಲ್ಲಿ ಸುಮಾರು ₹2 ಕೋಟಿ ಆಸ್ತಿ ಇದೆ. 2025–26ನೇ ಸಾಲಿನಲ್ಲಿ ಸಂಘಕ್ಕೆ ₹4.5 ಲಕ್ಷ ಆದಾಯ ಬಂದಿದೆ. ಉತ್ಪಾದಕರಿಗೆ ಪ್ರತಿ ₹100ಕ್ಕೆ ₹4.50ರಂತೆ ಬೋನಸ್ ನೀಡಲಾಗುವುದು. ಸಂಘಕ್ಕೆ ಎಷ್ಟು ಲಾಭ ಬಂದಿದೆ ಎನ್ನುವುದಕ್ಕಿಂತ ಸಂಘದ ಬಳಿ ಎಷ್ಟು ಆಸ್ತಿ ಹಾಗೂ ಸಂಪನ್ಮೂಲವಿದೆ ಎಂಬುದು ಮುಖ್ಯ. ಸದಸ್ಯರು ಇದೇ ರೀತಿ ಸಹಕಾರ ನೀಡಿದರೆ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು. ಸದಸ್ಯರು ಹಾಗೂ ನಿರ್ದೇಶಕರ ಮನವಿ ಮೇರೆಗೆ ಕಟ್ಟಡದಲ್ಲಿ ಕಂಪ್ಯೂಟರ್ ವ್ಯವಸ್ಥೆ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು” ಎಂದು ಹೇಳಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಗುಡಿಬಂಡೆ ಶಿಬಿರದ ನಿರ್ದೇಶಕ ಆದಿನಾರಾಯಣರೆಡ್ಡಿ ಮಾತನಾಡಿ, “ಜಿಲ್ಲೆಯಲ್ಲಿ ತೀವ್ರ ಬರಗಾಲ ಉಂಟಾಗಿರುವುದರಿಂದ ಹಾಲು ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ ₹50 ದರ ಸಿಗಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದರು.
“ನೀರಾವರಿ ಸೌಲಭ್ಯ ಹೊಂದಿರುವ ರೈತರು ಜೋಳ ಬೆಳೆದರೆ ಒಕ್ಕೂಟದಿಂದ ಬಿತ್ತನೆ ಜೋಳ ಒದಗಿಸಲಾಗುವುದು. ಅಲ್ಲದೆ, ಪ್ರತಿ ಎಕರೆಗೆ ₹5 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ದಿಬ್ಬೂರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಹಸುಗಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಬೇಕು” ಎಂದು ಹೇಳಿದರು.
ಸಭೆಯಲ್ಲಿ 2025–26ನೇ ಸಾಲಿನ ಲಾಭಾಂಶವನ್ನು ಸದಸ್ಯರಿಗೆ ವಿತರಿಸಲಾಯಿತು. ಅತಿ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ಪ್ರತಿ ವರ್ಷದಂತೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹವಾಗಿ ಹಾಟ್ ಬಾಕ್ಸ್ ಹಾಗೂ ಸಿಹಿ ವಿತರಿಸಲಾಯಿತು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಉಪವ್ಯವಸ್ಥಾಪಕಿ ಡಾ. ನವ್ಯಶ್ರೀ, ವಿಸ್ತರಣಾಧಿಕಾರಿ ಮೋಹನ್, ಗ್ರಾಮದ ಸಿ.ಜಿ. ರಾಮಕೃಷ್ಣರಾವ್, ಚಿಕ್ಕಪ್ಪಯ್ಯ, ಡಿ.ಎನ್. ಶಿವಣ್ಣ, ಸಂಘದ ನಿರ್ದೇಶಕರಾದ ಡಿ.ವಿ. ಶ್ರೀರಂಗಪ್ಪ, ನಾಗಪ್ಪ, ಸುಬ್ಬಣ್ಣ, ಡಿ.ಎನ್. ರಮೇಶ್, ನಾರಾಯಣಸ್ವಾಮಿ, ವೆಂಕಟರಮಣಪ್ಪ, ವರಲಕ್ಷ್ಮಮ್ಮ, ಗಂಗರತ್ನಮ್ಮ, ಕಾರ್ಯದರ್ಶಿ ಡಿ.ವಿ. ರಾಮಕೃಷ್ಣ, ಹಾಲು ಪರೀಕ್ಷಕಿ ಸಾವಿತ್ರಮ್ಮ, ಸಹಾಯಕಿ ನಾರಾಯಣಮ್ಮ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಇದ್ದರು.