
Sidlaghatta : ರೈತರ ಪ್ರಾಯೋಗಿಕ ಅನುಭವಕ್ಕೆ ವೈಜ್ಞಾನಿಕ ಹಾಗೂ ತಾಂತ್ರಿಕ ಜ್ಞಾನವನ್ನು ಬೆಸೆದರೆ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು ಎಂದು ಕೆಎಂಎಫ್ ಮಾಜಿ ನಿರ್ದೇಶಕ ಆರ್. ಶ್ರೀನಿವಾಸ್ ಹೇಳಿದರು.
In English: KMF former director R. Srinivas said blending farmers’ practical experience with scientific know-how can further develop agriculture and animal husbandry, speaking at a barren-cattle screening, animal health camp, and best-calf show organised by GKVK students in K.Muttukadahalli as part of their rural agricultural work-experience programme.
ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬುಧವಾರ ಆಯೋಜಿಸಿದ್ದ ಬರಡು ರಾಸುಗಳ ತಪಾಸಣೆ, ಪಶು ಆರೋಗ್ಯ ಚಿಕಿತ್ಸಾ ಶಿಬಿರ ಹಾಗೂ ಉತ್ತಮ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ತಲೆತಲಾಂತರಗಳಿಂದ ಜಾನುವಾರುಗಳ ಆರೈಕೆ ಕುರಿತು ಅಪಾರ ಪ್ರಾಯೋಗಿಕ ಜ್ಞಾನ ಹೊಂದಿದ್ದಾರೆ. ಈ ಅನುಭವವನ್ನು ಕಡೆಗಣಿಸದೆ, ಆಧುನಿಕ ಪಶುವೈದ್ಯಕೀಯ ಜ್ಞಾನ ಹಾಗೂ ತಂತ್ರಜ್ಞಾನದೊಂದಿಗೆ ಸಮನ್ವಯಗೊಳಿಸಬೇಕು. ಜಾನುವಾರುಗಳ ಆರೋಗ್ಯ, ಪೌಷ್ಟಿಕತೆ, ಗುಣಮಟ್ಟದ ಮೇವು, ಲಸಿಕೆ ಹಾಗೂ ಸಮಯೋಚಿತ ಚಿಕಿತ್ಸೆ ಬಗ್ಗೆ ರೈತರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಜಿಕೆವಿಕೆ ವಿದ್ಯಾರ್ಥಿಗಳು ಗ್ರಾಮದಲ್ಲಿ ಒಂದೂವರೆ ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದು, ರೈತರೊಂದಿಗೆ ಬೆರೆತು ಅವರ ಕೃಷಿ ಪದ್ಧತಿ ಹಾಗೂ ಸಮಸ್ಯೆಗಳನ್ನು ಅರಿಯುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಕ್ಷೇತ್ರಮಟ್ಟದ ಅನುಭವ ನೀಡುತ್ತವೆ ಎಂದರು.
ಕೃಷಿ ವಿಸ್ತರಣಾ ವಿಭಾಗದ ಡಾ. ಪಂಕಜಾ ಮಾತನಾಡಿ, ವಿದ್ಯಾರ್ಥಿಗಳು ರೈತರೊಂದಿಗೆ ನೇರವಾಗಿ ಸಂವಹನ ನಡೆಸಿ ಅವರ ಅನುಭವವನ್ನು ಕಲಿಯುವುದರ ಜೊತೆಗೆ, ತಾವು ಕಲಿತ ವೈಜ್ಞಾನಿಕ ಕೃಷಿ ಪದ್ಧತಿ ಹಾಗೂ ಆಧುನಿಕ ಪಶುಸಂಗೋಪನಾ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಬೇಕು ಎಂದು ಹೇಳಿದರು.
ಶಿಬಿರದಲ್ಲಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ, ರೋಗಗಳ ಮುನ್ನೆಚ್ಚರಿಕೆ ಕ್ರಮ, ಪೌಷ್ಟಿಕ ಆಹಾರ, ಗುಣಮಟ್ಟದ ಮೇವು ಹಾಗೂ ಲಸಿಕೆ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಉತ್ತಮ ಕರುಗಳ ಪ್ರದರ್ಶನದಲ್ಲಿ ಆಯ್ಕೆಯಾದ ಕರುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ.ಜೆ. ಪ್ರಶಾಂತ್, ಪಶುವೈದ್ಯಾಧಿಕಾರಿ ಡಾ. ನವೀನ್ ಚಂದ್ರ ಸೇರಿದಂತೆ ಪಶುವೈದ್ಯಕೀಯ ಸಿಬ್ಬಂದಿ ಹಾಗೂ ಜಿಕೆವಿಕೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.