
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು 2025–26ನೇ ಸಾಲಿನಲ್ಲಿ ₹10.07 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ನಾಗರಾಜ್ ತಿಳಿಸಿದರು.
In English: The Mallur Silk Growers and Farmers Cooperative Society posted a net profit of ₹10.07 lakh for 2025-26, DCC Bank director A. Nagaraj announced at the society’s annual general meeting, where president B.P. Hemanth Kumar reported 1,382 members and ₹9.62 crore in KCC loans disbursed to 555 farmers.
ಮಳ್ಳೂರು ಸಂಘದ ಆವರಣದಲ್ಲಿ ಅಧ್ಯಕ್ಷ ಬಿ.ಪಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
“ಮಳ್ಳೂರು ಸಂಘವು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹಿಂದಿನ ಆಡಳಿತ ಮಂಡಳಿಗಳು ಸಂಘಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿವೆ. ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಂಘವನ್ನು ಮತ್ತಷ್ಟು ಬಲಪಡಿಸಬೇಕು” ಎಂದು ಹೇಳಿದರು.
“ಡಿಸಿಸಿ ಬ್ಯಾಂಕ್ ನ ಹಿಂದಿನ ಅಧ್ಯಕ್ಷ ಗೋವಿಂದೇಗೌಡರ ಅವಧಿಯಲ್ಲಿ ಮಹಿಳಾ ಸಂಘಗಳಿಗೆ ಬಡ್ಡಿ ಕಟ್ಟಬೇಡಿ ಎಂದು ಸೂಚಿಸಿದ್ದರಿಂದ ಬ್ಯಾಂಕ್ ಗೆ ಸುಮಾರು ₹100 ಕೋಟಿ ನಷ್ಟವಾಗಿದೆ. ಈಗ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಕೊತ್ತೂರು ಮಂಜುನಾಥ್ ಅವರು ಶುದ್ಧಹಸ್ತರಾಗಿದ್ದು, ಎರಡು ಜಿಲ್ಲೆಗಳ ಬ್ಯಾಂಕ್ ಗಳಿಗೆ ಶಕ್ತಿ ತುಂಬಲಿದ್ದಾರೆ. ಮಳ್ಳೂರು ಸಂಘಕ್ಕೆ ₹10 ಕೋಟಿ ಸಾಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.
ಅಧ್ಯಕ್ಷ ಬಿ.ಪಿ.ಹೇಮಂತ್ ಕುಮಾರ್ ಮಾತನಾಡಿ, “ಸಂಘದಲ್ಲಿ 1,382 ಸದಸ್ಯರಿದ್ದು, 555 ಮಂದಿಗೆ ₹9.62 ಕೋಟಿ ಕೆಸಿಸಿ ಸಾಲ ನೀಡಲಾಗಿದೆ. ಸಂಘದ ವ್ಯಾಪ್ತಿಯಲ್ಲಿ 142 ಮಹಿಳಾ ಸ್ವಸಹಾಯ ಸಂಘಗಳಿದ್ದು, ಎಲ್ಲ ಸಂಘಗಳೂ ಸಾಲ ಮರುಪಾವತಿ ಮಾಡಿವೆ. ರಸಗೊಬ್ಬರ ಮಾರಾಟದಿಂದ ₹80 ಲಕ್ಷ ವಹಿವಾಟು ನಡೆದಿದೆ. ಷೇರುದಾರರ ₹1.12 ಕೋಟಿ ಠೇವಣಿಯನ್ನು ಡಿಸಿಸಿ ಬ್ಯಾಂಕ್ ನಲ್ಲಿ ಇರಿಸಲಾಗಿದೆ” ಎಂದು ತಿಳಿಸಿದರು.
ಸಿಇಒ ಎಂ.ಎಸ್.ಮಂಜುನಾಥ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಚುನಾವಣೆಗೆ ಉಳಿತಾಯದ ಹಣ ಬಳಸದೆ, ಸ್ಪರ್ಧಿಸುವ ಅಭ್ಯರ್ಥಿಗಳೇ ಚುನಾವಣಾ ವೆಚ್ಚ ಭರಿಸಬೇಕು ಎಂದು ಷೇರುದಾರರು ಸಲಹೆ ನೀಡಿದರು.
ಉಪಾಧ್ಯಕ್ಷ ಎನ್.ಅಣ್ಣಪ್ಪ, ವ್ಯವಸ್ಥಾಪಕ ಎಸ್.ಆನಂದ್, ನಿರ್ದೇಶಕರಾದ ಎಂ.ಆರ್.ಮುನಿಕೃಷ್ಣಪ್ಪ, ಬಿ.ಎಂ.ವೆಂಕಟರೆಡ್ಡಿ, ಕೆ.ಮುನಿರಾಜು, ಎಂ.ಎನ್.ಶ್ರೀನಿವಾಸಮೂರ್ತಿ, ಎ.ಬಿ.ನಾಗರಾಜ್, ಆರ್.ನಿಶಾಂತ್, ಸಿ.ಎಂ.ರತ್ನಮ್ಮ, ಟಿ.ಎಸ್.ಶಶಿಕಲಾ, ಪ್ರತಿನಿಧಿ ಬಿ.ಮಿಲನಶ್ರೀ, ಮುಖಂಡರಾದ ನಾರಾಯಣಸ್ವಾಮಿ, ಕದಿರಪ್ಪ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.