
Sidlaghatta : ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸೆ.19ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ಸದುಪಯೋಗಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ವಕೀಲರಿಗೆ ಮನವಿ ಮಾಡಿದರು.
In English: Ahead of the September 19 National Lok Adalat, Senior Civil Judge Mohammed Roshan Shah urged lawyers at a court meeting in Sidlaghatta to prioritize settling eligible disputes — especially cheque-bounce cases — through mediation to save clients time and money.
ನಗರದ ನ್ಯಾಯಾಲಯದಲ್ಲಿ ಬುಧವಾರ ನಡೆದ ವಕೀಲರ ಸಭೆಯಲ್ಲಿ ಮಾತನಾಡಿದ ಅವರು, ಕಕ್ಷಿದಾರರಿಗೆ ರಾಜಿ ಸಂಧಾನದಿಂದಾಗುವ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪ್ರಕರಣಗಳು ವರ್ಷಗಟ್ಟಲೆ ನ್ಯಾಯಾಲಯದಲ್ಲಿ ಮುಂದುವರಿದರೆ ಕಕ್ಷಿದಾರರ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಆದ್ದರಿಂದ ಸಾಧ್ಯವಿರುವ ವ್ಯಾಜ್ಯಗಳನ್ನು ಸಂಧಾನಕಾರರ (ಮೀಡಿಯೇಟರ್) ಮೂಲಕ ಇತ್ಯರ್ಥಪಡಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ನ್ಯಾಯಾಲಯದಲ್ಲಿ ವಾದ–ಪ್ರತಿವಾದ ನಡೆಸಿ ದೀರ್ಘಕಾಲದ ಬಳಿಕ ಪರಿಹಾರ ದೊರೆತರೂ, ಕಕ್ಷಿದಾರರಿಗೆ ಅದರ ಸಂಪೂರ್ಣ ಪ್ರಯೋಜನ ಸಿಗದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಲೋಕ್ ಅದಾಲತ್ಗಾಗಿ ಉಚ್ಚ ನ್ಯಾಯಾಲಯ ಹಾಗೂ ಸರ್ಕಾರ ಹೆಚ್ಚಿನ ವೆಚ್ಚ ಮತ್ತು ಶ್ರಮ ವಹಿಸುತ್ತಿದ್ದು, ಇದರ ಸಂಪೂರ್ಣ ಸದುಪಯೋಗವಾಗಬೇಕು ಎಂದು ಹೇಳಿದರು.
ವಿಶೇಷವಾಗಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ರಾಜಿ ಸಂಧಾನದ ಅಂತಿಮ ಫಲಿತಾಂಶ ಹಾಗೂ ಅದರ ಪ್ರಯೋಜನಗಳನ್ನು ವಿವರಿಸಿ, ಶೀಘ್ರ ಪರಿಹಾರ ಕಂಡುಕೊಳ್ಳಲು ವಕೀಲರು ಪ್ರೇರೇಪಿಸಬೇಕು ಎಂದು ಕೋರಿದರು.
ಸಿವಿಲ್ ಕೋರ್ಟ್ ತಿದ್ದುಪಡಿ ಕಾಯ್ದೆಯನ್ವಯ ನ್ಯಾಯಾಲಯಗಳ ಹಣಕಾಸು ನ್ಯಾಯವ್ಯಾಪ್ತಿಯಲ್ಲಿ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಕೆಲವು ಬಾಕಿ ಪ್ರಕರಣಗಳನ್ನು ಸಂಬಂಧಪಟ್ಟ ನ್ಯಾಯಾಲಯಗಳಿಗೆ ವರ್ಗಾಯಿಸಲಾಗುತ್ತಿದೆ. ವರ್ಗಾವಣೆಯಾಗುವ ಪ್ರಕರಣಗಳ ವಿವರಗಳನ್ನು ನ್ಯಾಯಾಲಯದ ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸಲಾಗುತ್ತಿದೆ.
ವಕೀಲರು ನೋಟಿಸ್ ಬೋರ್ಡ್ ಪರಿಶೀಲಿಸಿ, ತಮ್ಮ ಪ್ರಕರಣಗಳು ಯಾವ ನ್ಯಾಯಾಲಯಕ್ಕೆ ವರ್ಗಾವಣೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಹೊಸ ಪ್ರಕರಣ ಸಂಖ್ಯೆ ಹಾಗೂ ಮುಂದಿನ ವಿಚಾರಣೆ ದಿನಾಂಕವನ್ನು ಪರಿಶೀಲಿಸಿ, ತಮ್ಮ ಕಕ್ಷಿದಾರರನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಸೂಚಿಸಿದರು.
ವರ್ಗಾವಣೆಯಾದ ಪ್ರಕರಣಗಳ ಕುರಿತು ವಕೀಲರು ಸಮಯಕ್ಕೆ ಸರಿಯಾಗಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡರೆ ಕಕ್ಷಿದಾರರಿಗೆ ಅನಗತ್ಯ ನೋಟಿಸ್ ಜಾರಿಗೊಳಿಸುವ ವೆಚ್ಚ ಹಾಗೂ ಸಮಯವನ್ನು ತಪ್ಪಿಸಬಹುದು ಎಂದು ಅವರು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾವನಾ, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಗೂ ವಕೀಲರು ಹಾಜರಿದ್ದರು.