
Sidlaghatta : ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್)ಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪ್ಯಾಕೇಟ್ ಮಾಡುವ ಸ್ವಂತ ಘಟಕ ಇಲ್ಲದಿರುವುದರಿಂದ ಬೇರೆ ಘಟಕಗಳಲ್ಲಿ ಪ್ಯಾಕಿಂಗ್ ಮಾಡಿಸಬೇಕಾಗಿದ್ದು, ಇದರಿಂದ ಒಕ್ಕೂಟಕ್ಕೆ ಹೆಚ್ಚಿನ ನಷ್ಟವಾಗುತ್ತಿದೆ ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
In English: CHIMUL director Bank Muniyappa said the Chikkaballapur milk union incurs extra costs paying other dairies to pack its milk and products since it has no packing unit of its own, at Devaramallur milk producers’ cooperative’s annual general meeting, where he said a ₹80 crore in-house packing plant is being planned.
ತಾಲ್ಲೂಕಿನ ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬುಧವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕೋಲಾರದಿಂದ ಬೇರ್ಪಟ್ಟಿರುವ ಚಿಮುಲ್ ಗೆ ಸ್ವಂತ ಪ್ಯಾಕಿಂಗ್ ಘಟಕ ಇಲ್ಲ. ಹೀಗಾಗಿ ಕೋಲಾರ, ಬೆಂಗಳೂರು ಡೇರಿ ಹಾಗೂ ಕೆಎಂಎಫ್ ನ ವಿವಿಧ ಘಟಕಗಳಲ್ಲಿ ಹಣ ಪಾವತಿಸಿ ಹಾಲು ಮತ್ತು ಉತ್ಪನ್ನಗಳನ್ನು ಪ್ಯಾಕಿಂಗ್ ಮಾಡಿಸಲಾಗುತ್ತಿದೆ. ಇದರಿಂದ ಒಕ್ಕೂಟಕ್ಕೆ ಹೆಚ್ಚುವರಿ ವೆಚ್ಚವಾಗುತ್ತಿದ್ದು, ನಿರೀಕ್ಷಿತ ಮಟ್ಟದಲ್ಲಿ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಸುಮಾರು ₹80 ಕೋಟಿ ವೆಚ್ಚದಲ್ಲಿ ಚಿಮುಲ್ ಗೆ ಸ್ವಂತ ಪ್ಯಾಕಿಂಗ್ ಘಟಕ ಆರಂಭಿಸಲು ಚಿಂತಿಸಲಾಗುತ್ತಿದೆ. ಘಟಕ ಸ್ಥಾಪನೆಯಾದರೆ ಉತ್ಪಾದಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಗೆ ರೈತರು ಆದ್ಯತೆ ನೀಡಬೇಕು. ಗುಣಮಟ್ಟದ ಹಾಲು ಉತ್ಪಾದನೆಗೆ ಅಗತ್ಯವಿರುವ ನೆರವು ಮತ್ತು ಸಹಕಾರವನ್ನು ಡೇರಿಗಳು ನೀಡಬೇಕು. ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಡೇರಿ ಆಡಳಿತ ಮಂಡಳಿಗಳು ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದರು.
ಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ರವಿಕಿರಣ್ ಮಾತನಾಡಿ, ಬರಗಾಲದ ಪರಿಸ್ಥಿತಿಯಿಂದ ರಾಸುಗಳಿಗೆ ಹಸಿರು ಮೇವು ಮತ್ತು ನೀರಿನ ಕೊರತೆ ಉಂಟಾಗಿರುವುದರಿಂದ ಹಾಲಿನ ಉತ್ಪಾದನೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಇದರಿಂದ ಆತಂಕಪಡುವ ಅಗತ್ಯವಿಲ್ಲ ಎಂದರು.
ಹಾಲಿನ ಉತ್ಪಾದನೆ ಹೆಚ್ಚಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ನೀರಿನ ಸೌಲಭ್ಯವಿರುವ ರೈತರು ಮೇವಿನ ಜೋಳ ಬೆಳೆಯಲು ಉತ್ತೇಜನ ನೀಡಲಾಗುತ್ತಿದ್ದು, ಉಚಿತವಾಗಿ ಮೇವಿನ ಜೋಳದ ಬಿತ್ತನೆ ಬೀಜದ ಕಿಟ್ ಗಳನ್ನು ವಿತರಿಸಲಾಗುವುದು. ಒಂದು ಎಕರೆಯಲ್ಲಿ ಮೇವಿನ ಜೋಳ ಬೆಳೆದ ರೈತರಿಗೆ ₹5 ಸಾವಿರ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
ಪಶು ಆಹಾರದ ಗುಣಮಟ್ಟದ ಬಗ್ಗೆ ದೂರು:
ಸಾದಲಿ ಬಳಿಯ ಪಶು ಆಹಾರ ಘಟಕದಿಂದ ಇತ್ತೀಚೆಗೆ ಪೂರೈಕೆಯಾಗುತ್ತಿರುವ ಪಶು ಆಹಾರದ ಗುಣಮಟ್ಟದಲ್ಲಿ ಕೊರತೆ ಕಂಡುಬರುತ್ತಿದ್ದು, ಇದರಿಂದ ರಾಸುಗಳ ಹಾಲಿನ ಇಳುವರಿ ಹಾಗೂ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಕೆಲವು ಹಾಲು ಉತ್ಪಾದಕರು ಸಭೆಯಲ್ಲಿ ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ. ರವಿಕಿರಣ್, ಖರೀದಿಸಿರುವ ಪಶು ಆಹಾರದ ಚೀಲದಿಂದ ಒಂದು ಕೆ.ಜಿ. ಆಹಾರವನ್ನು ಹಾಗೂ ಚೀಲದ ಮೇಲೆ ನಮೂದಿಸಿರುವ ಕಚ್ಚಾ ಪದಾರ್ಥಗಳ ವಿವರವನ್ನು ಡೇರಿ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಬಹುದು. ರೈತರು ಮಾದರಿ ನೀಡಿದರೆ ಡೇರಿ ವತಿಯಿಂದಲೇ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಲಾಗುವುದು ಎಂದರು.
ಚೀಲದ ಮೇಲೆ ನಮೂದಿಸಿರುವ ಕಚ್ಚಾ ಪದಾರ್ಥಗಳು ಪಶು ಆಹಾರದಲ್ಲಿ ಇಲ್ಲದಿರುವುದು ಪರೀಕ್ಷೆಯಲ್ಲಿ ದೃಢಪಟ್ಟರೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಡೇರಿಯ ವಾರ್ಷಿಕ ಆದಾಯ–ಖರ್ಚಿನ ವಿವರ ಮಂಡಿಸಲಾಯಿತು. ಡೇರಿಯು ಸುಮಾರು ₹8 ಲಕ್ಷ ಲಾಭ ಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸದಸ್ಯರು ಆಡಳಿತ ಮಂಡಳಿ, ಹಾಲು ಉತ್ಪಾದಕರು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು.
ಹಾಲು ಉತ್ಪಾದಕ ರೈತರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ನಗದು ಬಹುಮಾನ ವಿತರಿಸಲಾಯಿತು. 2025–26ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ಪೂರೈಸಿದ ಮೂವರು ರೈತರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಆನಂದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೇಶವರೆಡ್ಡಿ, ಚಿಮುಲ್ ನಿರ್ದೇಶಕ ಹುಜುಗೂರು ರಾಮಣ್ಣ, ವಿಸ್ತರಣಾಧಿಕಾರಿ ಎಂ. ನರಸಿಂಹರೆಡ್ಡಿ, ಡೇರಿ ಸಿಇಒ ವಿ. ಮಂಜುನಾಥ್, ನಿರ್ದೇಶಕರು, ಸಿಬ್ಬಂದಿ ಹಾಗೂ ಹಾಲು ಉತ್ಪಾದಕರು ಇದ್ದರು.