
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪಲ್ಲಿಚೇರ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಗರನಾಯಕನಹಳ್ಳಿಯಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವುದನ್ನು ಖಂಡಿಸಿ ಗ್ರಾಮದ ಮಹಿಳೆಯರು ಬುಧವಾರ ಖಾಲಿ ಬಿಂದಿಗೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
In English: Women in Doggarnayakanahalli under Pallicherlu Gram Panchayat laid siege to the panchayat office with empty pots, protesting a two-month-long drinking water shortage despite completed Jal Jeevan Mission works, forcing private tankers at ₹1,500-2,000 each; the PDO promised a fix within a day.
ಕಳೆದ ಕೆಲವು ದಿನಗಳಿಂದ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮದಲ್ಲಿರುವ ಮೂರು–ನಾಲ್ಕು ಕೊಳವೆಬಾವಿಗಳಲ್ಲಿ ನೀರು ಲಭ್ಯವಿದ್ದರೂ, ಅವುಗಳಿಗೆ ಪಂಪ್ ಮೋಟಾರ್ ಅಳವಡಿಸಿ ನೀರು ಪೂರೈಸಲು ಪಂಚಾಯಿತಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥೆ ಸುಜಾತ ದೂರಿದರು.
ಕುಡಿಯುವ ನೀರಿಗಾಗಿ ಖಾಸಗಿ ಟ್ಯಾಂಕರ್ ಗಳನ್ನು ಅವಲಂಬಿಸಬೇಕಾಗಿದ್ದು, ಒಂದು ಟ್ಯಾಂಕರ್ ಗೆ ₹1,500ರಿಂದ ₹2,000 ವರೆಗೆ ಪಾವತಿಸಬೇಕಾಗಿದೆ. ಇದರಿಂದ ಬಡ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಗ್ರಾಮಸ್ಥ ಶಶಿಕುಮಾರ್ ಹೇಳಿದರು.
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದರೂ, ಮನೆಮನೆಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಗ್ರಾಮದಲ್ಲಿರುವ ಕೊಳವೆಬಾವಿಗಳಿಗೆ ತಕ್ಷಣ ಪಂಪ್ ಮೋಟಾರ್ ಅಳವಡಿಸಿ ನಿಯಮಿತವಾಗಿ ನೀರು ಪೂರೈಸಬೇಕು. ಜತೆಗೆ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ನೀರು ತಲುಪಿಸುವ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಪಿಡಿಒ ಮಧು ಅವರು ಸಭೆಗೆ ತೆರಳಿದ್ದರಿಂದ ದೂರವಾಣಿ ಮೂಲಕ ಮಾತನಾಡಿ, ಒಂದು ದಿನದೊಳಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಮುನಿವೆಂಕಟೇಶ, ಬೈರಾರೆಡ್ಡಿ, ಡಿ.ಎಂ. ಮಂಜುನಾಥ್, ಶರಣ್, ಶ್ರೀಧರ್, ನಾರಾಯಣಮ್ಮ, ಸುಗುಣ, ನಾಗಮ್ಮ, ರುಕ್ಮಣಿಯಮ್ಮ, ಲಕ್ಷ್ಮಿದೇವಮ್ಮ, ಆನಂದ, ಮಂಜುನಾಥ್, ಸತೀಶ್, ಕೃಷ್ಣಪ್ಪ, ಗಂಗಪ್ಪ, ಕೆಂಪರೆಡ್ಡಿ, ಪವನ್, ಮನೋಹರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.