ಕರೋನ ಹಿನ್ನೆಲೆ ಸ್ಥಗಿತಗೊಳಸಿದ್ದ ಶಾಲಾ ಕಾಲೇಜುಗಳು ಪುನಾರಂಭವಾಗಿದೆ. ಅದರೆ, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಿ ಬರಲು ನಿಗದಿತ ಸಮಯಕ್ಕೆ ಸಾರಿಗೆ ಬಸ್ ಸೌಲಭ್ಯವಿಲ್ಲದೆ, ದಿನನಿತ್ಯ ಹಳ್ಳಿಗಳಿಂದ ನಗರದ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗದ ಕಡೆಗೆ ವಿದ್ಯಾರ್ಥಿಗಳು ಹೋಗಿಬರಲು ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಅವಲಂಬಿಸಿದ್ದಾರೆ. ಶಿಡ್ಲಘಟ್ಟದಿಂದ ಕೈವಾರ ಮಾರ್ಗವಾಗಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಿಗದಿತ ಸಮಯಕ್ಕೆ ಬರುತ್ತಿಲ್ಲ. ಈ ಮಾರ್ಗದಲ್ಲಿ ಸಂಚರಿಸುತಿದ್ದ ಹಲವು ಬಸ್ ಗಳನ್ನು ನಿಲ್ಲಿಸಲಾಗಿದೆ. ಇದರಿಂದ ಬಸ್ ಗಳಲ್ಲಿ, ಎರಡು ಬಸ್ಸಿನ ಜನರನ್ನು ಒಂದೇ ಬಸ್ಸಿನಲ್ಲಿ ಕುರಿಗಳಂತೆ ತುಂಬಿಸಿಕೊಂಡು ಹೋಗುತ್ತಿವೆ.
“ಮಹಿಳೆಯರು ಪುರಷರ ಜೊತೆಗೆ ನೂಕು ನುಗ್ಗಾಟದ ಮೂಲಕ ಬಸ್ ನಲ್ಲಿ ಪ್ರಯಾಣಿಸಬೇಕಿದೆ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಮುಜುಗರಕ್ಕೆ ಈಡಾಗುವಂತಾಗಿದೆ. ಸರ್ಕಾರಿ ಸಾರಿಗೆ ವಾಹನಗಳಿಂದ ಗ್ರಾಮೀಣಭಾಗದ ಜನತೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ” ಎಂದು ಶಿಕ್ಷಕಿ ಗೊರಮಡುಗು ಸುಧಾ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕೈವಾರ ಮಾರ್ಗವಾಗಿ ಸಂಚರಿಸುತ್ತಿದ್ದ ಹಲವು ಬಸ್ ಗಳನ್ನೂ ಈಗಾಗಲೇ ಬೇರೆ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ಸರಿಯಾದ ಸಮಯಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯವಿಲ್ಲದೆ ಸಾಕಷ್ಟು ವೃದ್ದರು, ಗರ್ಬಿಣಿ ಮತ್ತು ಬಾಣಂತಿಯರು ಹಾಗೂ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಪರದಾಡುವಂತಾಗಿದೆ.
ನಗರದ ಬಸ್ ನಿಲ್ದಾಣದಿಂದ ವಿವಿಧ ಗ್ರಾಮಗಳಿಗೆ ಸಂಜೆ 5 ಗಂಟೆಗೆ ಹೋಗುವ ಬಸ್ಸಿನಲ್ಲಿ, ಬಾಗಿಲು ತನಕ ವಿದ್ಯಾರ್ಥಿಗಳನ್ನು ನೇತಾಡಿಸಿಕೊಂಡು ವಿವಿಧ ಗ್ರಾಮಗಳಿಗೆ ಪ್ರಯಾಣಿಸುತ್ತಿದ್ದಾರೆ. ಬಸ್ ನಲ್ಲಿ ಜಾಗ ಇಲ್ಲದೆ ಹಲವು ವಿದ್ಯಾರ್ಥಿಗಳು ಆಟೋ ಮಾಡಿಕೊಂಡು ತಮ್ಮ ಮನೆಗಳಿಗೆ ತೆರಳುವಂತಾಗುತ್ತಿದೆ. ಒಟ್ಟಾರೆ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುವ ಮೂಲಕ ಸರ್ಕಾರಿ ಬಸ್ಸುಗಳಲ್ಲಿ ಸಾಗುವಂತಾಗಿದೆ.
ಬಸ್ ನಿಲ್ದಾಣದ ಟಿಸಿ ನೀಡುವ ಹಾರಿಕೆ ಉತ್ತರದಿಂದ ವಿದ್ಯಾರ್ಥಿಗಳು ರೊಚ್ಚಿಗೆದ್ದು,ಈಗಾಗಲೇ ಸ್ಥಗಿತಗೊಳಿಸಿಸಿರುವ ಬಸ್ ಗಳನ್ನು ಪುನರಾರಂಭಿಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸಂಬಂದ ಪಟ್ಟ ಡಿಪೋ ಅಧಿಕಾರಿಗಳು ಮಾತ್ರ ಜಾಣ ಕುರುಡರಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತೆರಳುವಂತೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ರೀತಿಯ ಕ್ರಮ ವಹಿಸಬೇಕು. ಜೊತೆಗೆ ಈ ಹಿಂದೆ ಇದ್ದ ಮಾರ್ಗ ಸೂಚಿಯಂತೆ ಬಸ್ಸುಗಳು ತೆರಳುವಂತಾಗಬೇಕು. ಬಸ್ ನಲ್ಲಿ ಸಾಮಾಜಿಕ ಅಂತರವಿಲ್ಲದೆ ಪ್ರಯಾಣಿಕರು ಪ್ರಯಾಣಿಸುವುದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಉತ್ತರಿಸಬೆಕಿದೆ. ಕಾರುಗಳಲ್ಲಿ ಸಂಚರಿಸುವ ಜನಪ್ರತಿನಿಧಿಗಳೂ ಸಹ ಈ ಬಗ್ಗೆ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.