Home News ಸಾಗರದಾಚೆ ಮೆಲ್ಬರ್ನ್‌ನಲ್ಲೂ ದಸರಾ ಗೊಂಬೆ ಹಬ್ಬ: 20 ವರ್ಷಗಳಿಂದ ತವರಿನ ಸಂಪ್ರದಾಯ ಮುಂದುವರಿಸಿದ ಮಹಿಳೆ

ಸಾಗರದಾಚೆ ಮೆಲ್ಬರ್ನ್‌ನಲ್ಲೂ ದಸರಾ ಗೊಂಬೆ ಹಬ್ಬ: 20 ವರ್ಷಗಳಿಂದ ತವರಿನ ಸಂಪ್ರದಾಯ ಮುಂದುವರಿಸಿದ ಮಹಿಳೆ

0
Melbourne Dasara gombe habba doll display by Saubhagyalakshmi Anand originally of Melur Sidlaghatta

Sidlaghatta : ತವರಿನ ಮಣ್ಣಿನ ನೆನಪು, ಸಂಸ್ಕೃತಿಯ ಮೇಲಿನ ಅಭಿಮಾನ, ತಲೆಮಾರುಗಳಿಂದ ಬೆಳೆದು ಬಂದ ಸಂಪ್ರದಾಯದ ಮೇಲಿನ ಪ್ರೀತಿ. ಇವೆಲ್ಲವೂ ಒಂದಾಗಿ ಸಾಗರದಾಚೆ ಆಸ್ಟ್ರೇಲಿಯಾದ ಮೆಲ್ಬರ್ನ್‌ ನಲ್ಲಿ ದಸರಾ ಗೊಂಬೆ ಹಬ್ಬಕ್ಕೆ ಕಳೆ ತಂದಿವೆ. ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಹೆಣ್ಣುಮಗಳು ಸೌಭಾಗ್ಯಲಕ್ಷ್ಮಿ ಆನಂದ್ ಅವರು, ವಿವಾಹದ ಬಳಿಕ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೂ, ತವರಿನ ಗೊಂಬೆ ಹಬ್ಬದ ಸಂಪ್ರದಾಯವನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಮೇಲೂರು ಗ್ರಾಮದ ಬಿ.ಎಂ. ಕೃಷ್ಣಮೂರ್ತಿ ಅವರ ಪುತ್ರಿ ಸೌಭಾಗ್ಯಲಕ್ಷ್ಮಿ ಅವರು, ಮೆಲ್ಬರ್ನ್‌ ನಲ್ಲಿ ತಮ್ಮ ಮನೆಯಲ್ಲಿ ವಿವಿಧ ಬಗೆಯ ಗೊಂಬೆಗಳನ್ನು ಹಂತ ಹಂತವಾಗಿ ಜೋಡಿಸಿ, ಅಲಂಕರಿಸಿ ಪೂಜಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಅನಿವಾಸಿ ಭಾರತೀಯರನ್ನು ಆಹ್ವಾನಿಸಿ, ಅವರೊಂದಿಗೆ ಸಂಭ್ರಮ ಹಂಚಿಕೊಳ್ಳುತ್ತಾರೆ. ಈ ಮೂಲಕ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ ತವರಿನ ಸಂಸ್ಕೃತಿ ಮತ್ತು ಹಬ್ಬದ ಆಚರಣೆಯ ನಂಟನ್ನು ಉಳಿಸಿಕೊಂಡಿದ್ದಾರೆ.

ದೇವರ ಲೋಕದಿಂದ ಗ್ರಾಮೀಣ ಬದುಕಿನವರೆಗೆ ವೈವಿಧ್ಯಮಯ ಗೊಂಬೆಗಳು

ಸೌಭಾಗ್ಯಲಕ್ಷ್ಮಿ ಅವರ ಮನೆಯ ಗೊಂಬೆ ಅಲಂಕಾರದಲ್ಲಿ ಧಾರ್ಮಿಕ, ಪೌರಾಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಹಲವು ಮುಖಗಳು ಅನಾವರಣಗೊಂಡಿವೆ. ಬಿಳಿ ಬಟ್ಟೆಯಿಂದ ಅಲಂಕರಿಸಿದ ಬಹುಹಂತದ ವೇದಿಕೆಯಲ್ಲಿ ಸಾಲುಸಾಲಾಗಿ ಜೋಡಿಸಿರುವ ಬಣ್ಣಬಣ್ಣದ ದೇವರ ಗೊಂಬೆಗಳು, ಪೌರಾಣಿಕ ಪಾತ್ರಗಳು ಹಾಗೂ ವಿವಿಧ ಸನ್ನಿವೇಶಗಳ ಪ್ರತಿಕೃತಿಗಳು ನೋಡುಗರ ಗಮನ ಸೆಳೆಯುತ್ತವೆ. ವೇದಿಕೆಯ ಸುತ್ತಲೂ ನೀಲಿ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಹಬ್ಬದ ಮೆರುಗನ್ನು ಹೆಚ್ಚಿಸಿದೆ.

ದಶಾವತಾರ, ದತ್ತಾತ್ರೇಯ, ಮೀರೆ ಮೊದಲಾದ ಧಾರ್ಮಿಕ ಹಾಗೂ ಪೌರಾಣಿಕ ವ್ಯಕ್ತಿತ್ವಗಳ ಗೊಂಬೆಗಳ ಜತೆಗೆ ಸಿಂಡ್ರೆಲಾದಂತಹ ಕಥಾಪಾತ್ರಗಳಿಗೂ ಇಲ್ಲಿ ಸ್ಥಾನವಿದೆ. ಗಜೇಂದ್ರ ಮೋಕ್ಷ, ಗಣೇಶನಿಗೆ ಆನೆಯ ತಲೆಯನ್ನು ಜೋಡಿಸುವ ಸನ್ನಿವೇಶ ಹಾಗೂ ಬಾಸ್ಕೆಟ್‌ ಬಾಲ್ ಪಂದ್ಯವನ್ನೂ ಗೊಂಬೆಗಳ ಮೂಲಕ ರೂಪಿಸಿರುವುದು ವಿಶೇಷ. ಸಂಪ್ರದಾಯದ ಜತೆಗೆ ಸೃಜನಶೀಲತೆಗೂ ಆದ್ಯತೆ ನೀಡಿರುವುದು ಈ ಗೊಂಬೆ ಹಬ್ಬದ ವೈಶಿಷ್ಟ್ಯವಾಗಿದೆ.

ಕೆಲವು ಗೊಂಬೆಗಳನ್ನು ತವರಿನಿಂದಲೇ ಖರೀದಿಸಿ ಆಸ್ಟ್ರೇಲಿಯಾಕ್ಕೆ ಕೊಂಡೊಯ್ದಿದ್ದರೆ, ಇನ್ನೂ ಕೆಲವು ಗೊಂಬೆಗಳನ್ನು ಸೌಭಾಗ್ಯಲಕ್ಷ್ಮಿ ಅವರೇ ಸ್ವತಃ ತಯಾರಿಸಿದ್ದಾರೆ. ಭಾರತೀಯ ಪೌರಾಣಿಕ ಕಥೆಗಳು, ಗ್ರಾಮೀಣ ಬದುಕಿನ ಚಿತ್ರಣದ ಜತೆಗೆ ಆಸ್ಟ್ರೇಲಿಯಾದ ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಗೊಂಬೆಗಳಿಗೂ ಅವಕಾಶ ಕಲ್ಪಿಸುವ ಮೂಲಕ, ವಿಭಿನ್ನ ಸಂಸ್ಕೃತಿಗಳ ನಡುವಿನ ಪರಸ್ಪರ ಪರಿಚಯ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಗೊಂಬೆ ಹಬ್ಬ ವೇದಿಕೆಯಾಗಿದೆ.

ಮೇಲೂರಿನ ಮನೆಯಲ್ಲಿ ಮೂರು ತಲೆಮಾರುಗಳ ಸಂಪ್ರದಾಯ

ಮೇಲೂರಿನ ತಮ್ಮ ಮನೆಯಲ್ಲಿ ಮೂರು ತಲೆಮಾರುಗಳಿಂದ ಗೊಂಬೆ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪಟ್ಟದ ಗೊಂಬೆಗಳು, ಮೂವತ್ತು ಬಗೆಯ ಗಣೇಶನ ಗೊಂಬೆಗಳು, ಎತ್ತಿನ ಗಾಡಿಯಲ್ಲಿ ದವಸಧಾನ್ಯಗಳನ್ನು ಮಾರುಕಟ್ಟೆಗೆ ಸಾಗಿಸುವ ರೈತ ದಂಪತಿ, ತಲೆಯ ಮೇಲೆ ತರಕಾರಿ ಹೊತ್ತು ಸಾಗುವ ರೈತರು, ದಿನಸಿ ಮಾರುವ ಶೆಟ್ಟಿ ಅಂಗಡಿ, ಶ್ರೀರಾಮನಿಗೆ ಹಣ್ಣು ನೀಡುವ ಶಬರಿ ಹೀಗೆ ಗ್ರಾಮೀಣ ಬದುಕು, ವೃತ್ತಿಗಳು ಹಾಗೂ ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ಹತ್ತಾರು ಬಗೆಯ ಗೊಂಬೆಗಳು ಇವರ ಸಂಗ್ರಹದಲ್ಲಿವೆ.

ಗೊಂಬೆ ಹಬ್ಬವು ಮಕ್ಕಳಿಗೆ ಪೌರಾಣಿಕ ಕಥೆಗಳು ಮತ್ತು ಸಂಪ್ರದಾಯಗಳನ್ನು ಪರಿಚಯಿಸುವುದರ ಜತೆಗೆ, ಹಿಂದಿನ ಕಾಲದ ಗ್ರಾಮೀಣ ಬದುಕು, ಕೃಷಿ ಚಟುವಟಿಕೆಗಳು ಹಾಗೂ ಸಾಮಾಜಿಕ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾಧ್ಯಮವೂ ಆಗಿದೆ. ಈ ಹಿನ್ನೆಲೆಯಲ್ಲಿ ಗೊಂಬೆಗಳ ಜೋಡಣೆ ಮತ್ತು ಪ್ರದರ್ಶನವು ಸಂಸ್ಕೃತಿಯ ನೆನಪುಗಳನ್ನು ಜೀವಂತವಾಗಿಡುವ ಪ್ರಯತ್ನವಾಗಿದೆ.

ತಂಗಿಯ ಆಚರಣೆಯ ಬಗ್ಗೆ ಅಣ್ಣನ ಹೆಮ್ಮೆ

“ನಮ್ಮ ಮೇಲೂರಿನ ಮನೆಯಲ್ಲಿ ಮೂರು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಗೊಂಬೆ ಹಬ್ಬದ ಸಂಪ್ರದಾಯವನ್ನು ನನ್ನ ತಂಗಿ ಸೌಭಾಗ್ಯಲಕ್ಷ್ಮಿ ಅವರು ದೂರದ ಮೆಲ್ಬರ್ನ್‌ ನಲ್ಲೂ ಮುಂದುವರಿಸಿಕೊಂಡು ಬರುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ನಮ್ಮ ಮನೆಯ ಸಂಪ್ರದಾಯ, ತವರಿನ ಸಂಸ್ಕೃತಿ ಹಾಗೂ ಹಬ್ಬದ ಆಚರಣೆಯನ್ನು ಅವರು ವಿದೇಶದಲ್ಲಿದ್ದರೂ ಮರೆತಿಲ್ಲ. ಹಬ್ಬಕ್ಕೆ ಮನೆಗೆ ಬಂದವರಿಗೆ ಸಿಹಿ ತಿಂಡಿ ನೀಡಿ, ತಾಂಬೂಲದೊಂದಿಗೆ ಸತ್ಕರಿಸುವುದು ನಮ್ಮ ಸಂಪ್ರದಾಯ” ಎಂದು ಮೇಲೂರಿನ ಎಂ.ಕೆ. ರವಿಪ್ರಸಾದ್ ಸಂತಸ ವ್ಯಕ್ತಪಡಿಸುತ್ತಾರೆ.

ಸಂಸ್ಕೃತಿಯ ಸೇತುವೆಯಾದ ಹಬ್ಬ

ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಕುಟುಂಬದ ಸದಸ್ಯರನ್ನು ಭಾವನಾತ್ಮಕವಾಗಿ ಬೆಸೆಯುವ ಕೊಂಡಿಗಳೂ ಹೌದು. ತವರಿನಿಂದ ದೂರವಿದ್ದರೂ ಅಲ್ಲಿನ ಸಂಪ್ರದಾಯವನ್ನು ಉಳಿಸಿಕೊಂಡು, ಸ್ಥಳೀಯ ಭಾರತೀಯರನ್ನು ಆಹ್ವಾನಿಸಿ ಹಬ್ಬ ಆಚರಿಸುವ ಸೌಭಾಗ್ಯಲಕ್ಷ್ಮಿ ಅವರ ಪ್ರಯತ್ನವು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ತಮ್ಮ ಬೇರುಗಳೊಂದಿಗಿನ ನಂಟನ್ನು ಉಳಿಸಿಕೊಳ್ಳಲು ಪ್ರೇರಣೆಯಾಗಿದೆ.

ಮೇಲೂರಿನ ಮನೆಯ ಅಂಗಳದಿಂದ ಆರಂಭವಾದ ಗೊಂಬೆ ಹಬ್ಬದ ಸಂಭ್ರಮ ಮೆಲ್ಬರ್ನ್‌ ನ ಮನೆಯಲ್ಲೂ ಮುಂದುವರಿದಿದೆ. ದೇಶದ ಗಡಿಗಳನ್ನು ದಾಟಿದರೂ ಸಂಪ್ರದಾಯದ ಬೇರುಗಳು ಗಟ್ಟಿಯಾಗಿಯೇ ಉಳಿಯಬಲ್ಲವು ಎಂಬುದಕ್ಕೆ ಈ ಗೊಂಬೆ ಹಬ್ಬ ಸಾಕ್ಷಿಯಾಗಿದೆ.

In English: Saubhagyalakshmi Anand, a daughter of Melur village in Sidlaghatta taluk who settled in Australia after marriage, has kept up the family’s Dasara ‘Gombe Habba’ (doll display) tradition in Melbourne for the past 20 years. Daughter of B.M. Krishnamurthy of Melur, she arranges dolls on a tiered stage at home, invites local non-resident Indians, and includes dolls she made herself as well as ones bought from India; the display has gods, mythological scenes, fairy-tale characters such as Cinderella and even a basketball match. Her brother M.K. Ravi Prasad says the family has celebrated the festival for three generations at Melur.

For Daily Updates WhatsApp ‘HI’ to 7406303366

error: Content is protected !!
Exit mobile version