Home News ಹಾಲಿಗೆ ಲೀಟರ್‌ಗೆ ₹40 ದರ ನಿಗದಿಪಡಿಸಿ: ಚಿಮುಲ್ ನಿರ್ದೇಶಕ ಆಗ್ರಹ, ಸಭೆಯಲ್ಲಿ ಗದ್ದಲ

ಹಾಲಿಗೆ ಲೀಟರ್‌ಗೆ ₹40 ದರ ನಿಗದಿಪಡಿಸಿ: ಚಿಮುಲ್ ನಿರ್ದೇಶಕ ಆಗ್ರಹ, ಸಭೆಯಲ್ಲಿ ಗದ್ದಲ

0
Lamp lighting ceremony at Appegowdanahalli Milk Producers Cooperative Society annual general meeting, Sidlaghatta taluk

Sidlaghatta : ಬರ ಹಾಗೂ ಹಾಲು ಉತ್ಪಾದನಾ ವೆಚ್ಚ ಹೆಚ್ಚಳದಿಂದ ಹೈನುಗಾರರು ಸಂಕಷ್ಟದಲ್ಲಿದ್ದು, ಹಾಲು ಉತ್ಪಾದಕರಿಗೆ ಲೀಟರ್‌ಗೆ ಕನಿಷ್ಠ ₹40 ದೊರೆಯಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ (ಚಿಮುಲ್) ನಿರ್ದೇಶಕ ಬಂಕ್ ಮುನಿಯಪ್ಪ ಒತ್ತಾಯಿಸಿದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬಿಎಂಸಿ ಕೇಂದ್ರದ ಆವರಣದಲ್ಲಿ ಸೋಮವಾರ ನಡೆದ 2025–26ನೇ ಸಾಲಿನ ವಾರ್ಷಿಕ ಸಾಮಾನ್ಯ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಹಾಲಿನ ದರ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್ 22ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಂಘವು 2025–26ನೇ ಸಾಲಿನಲ್ಲಿ ₹8,44,407.96 ನಿವ್ವಳ ಲಾಭ ಗಳಿಸಿದೆ. ಹಾಲು ಉತ್ಪಾದಕರ ಶ್ರಮ ಹಾಗೂ ಆಡಳಿತ ಮಂಡಳಿಯ ಪಾರದರ್ಶಕ ನಿರ್ವಹಣೆಯಿಂದ ಸಂಘ ಪ್ರಗತಿಯತ್ತ ಸಾಗಿದ್ದು, ಉತ್ತಮ ಲಾಭ ದಾಖಲಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

₹80 ಕೋಟಿಯಲ್ಲಿ ಪ್ಯಾಕಿಂಗ್ ಘಟಕ

ಚಿಮುಲ್‌ನಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪ್ಯಾಕೇಟ್ ಮಾಡುವ ಸ್ವಂತ ಘಟಕ ಇಲ್ಲದ ಕಾರಣ ವರ್ಷಕ್ಕೆ ಸುಮಾರು ₹35 ಕೋಟಿ ನಷ್ಟವಾಗುತ್ತಿದೆ. ಸುಮಾರು ₹80 ಕೋಟಿ ವೆಚ್ಚದಲ್ಲಿ ಸ್ವಂತ ಪ್ಯಾಕಿಂಗ್ ಘಟಕ ಸ್ಥಾಪಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಘಟಕ ಕಾರ್ಯಾರಂಭ ಮಾಡಿದ ಬಳಿಕ ನಷ್ಟದಿಂದ ಹೊರಬಂದು ಹಾಲು ಉತ್ಪಾದಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ ಎಂದು ಮುನಿಯಪ್ಪ ತಿಳಿಸಿದರು.

ಚಿಮುಲ್ ನಿರ್ದೇಶಕ ಹುಜುಗೂರು ರಾಮಣ್ಣ ಮಾತನಾಡಿ, ಹಾಲು ಉತ್ಪಾದಕರ ಹಿತರಕ್ಷಣೆ ಹಾಗೂ ಡೇರಿಗಳ ಅಭಿವೃದ್ಧಿಗೆ ಒಕ್ಕೂಟ ಬದ್ಧವಾಗಿದೆ. ಅಪ್ಪೇಗೌಡನಹಳ್ಳಿಯಲ್ಲಿ ಸುಸಜ್ಜಿತ ನೂತನ ಡೇರಿ ಕಟ್ಟಡ ನಿರ್ಮಾಣಕ್ಕೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಸಂಘದ ಅಧ್ಯಕ್ಷ ಕೆ. ಹನುಮಂತರಡ್ಡಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷ ವೆಂಕಟೇಶ್, ಚಿಮುಲ್ ಶಿಡ್ಲಘಟ್ಟ ಶಿಬಿರದ ಉಪ ವ್ಯವಸ್ಥಾಪಕ ಬಿ.ಆರ್. ರವಿಕಿರಣ್, ವಿಸ್ತರಣಾಧಿಕಾರಿ ಮಂಜುನಾಥ್ ಡಿ., ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ, ಎಂಪಿಸಿಎಸ್ ಮಾಜಿ ಅಧ್ಯಕ್ಷ ಮುನಿನಾರಾಯಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಮುನೀಂದ್ರ, ಗಂಗರತ್ನಮ್ಮ, ಉಪಾಧ್ಯಕ್ಷೆ ಮಂಜುಳಮ್ಮ, ಸಂಘದ ನಿರ್ದೇಶಕರು ಹಾಗೂ ಹಾಲು ಉತ್ಪಾದಕರು, ಡೇರಿ ಸಿಬ್ಬಂದಿ ಹಾಜರಿದ್ದರು.

ಸಭೆಯಲ್ಲಿ ಮತ್ತೆ ಗದ್ದಲ

ವಾರ್ಷಿಕ ಸಭೆಯ ಸ್ವಾಗತ ಭಾಷಣ ಆರಂಭವಾಗುತ್ತಿದ್ದಂತೆ ನಿರ್ದೇಶಕರೊಬ್ಬರು, “ನನಗೆ ಸಭೆಗೆ ಆಹ್ವಾನ ನೀಡಿಲ್ಲ. ಕಳೆದ ವರ್ಷವೂ ಇದೇ ರೀತಿ ಮಾಡಿದ್ದೀರಿ. ಇದು ಈ ವರ್ಷದ ಸಭೆಯೋ ಅಥವಾ ಹಿಂದಿನ ವರ್ಷದ ಸಭೆಯೋ ಎಂಬುದನ್ನು ಸ್ಪಷ್ಟಪಡಿಸಿದ ಬಳಿಕ ಸಭೆ ಮುಂದುವರಿಸಬೇಕು” ಎಂದು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

ಕಳೆದ ವರ್ಷ ಸಭೆ ನಡೆಸದೆ, ಈ ವರ್ಷ ವಿಶೇಷ ಸಭೆ ನಡೆಸುವುದಾಗಿ ತಿಳಿಸಲಾಗಿತ್ತು ಎಂದು ಆ ನಿರ್ದೇಶಕರು ಇದು ಯಾವ ಸಭೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ. ಸಂಘದ ಕಾರ್ಯದರ್ಶಿ ಅಪ್ಪಾಜಿಗೌಡ ಅವರು ಕೆಲಸ ನಿರ್ವಹಿಸಿಲ್ಲ, ದಾಖಲೆಗಳನ್ನು ಬರೆದಿಲ್ಲ ಎಂದೂ ಆ ನಿರ್ದೇಶಕರು ಆರೋಪಿಸಿದ್ದಾರೆ, ಆದರೂ ಒಂದು ವರ್ಷದಿಂದ ವೇತನ ನೀಡಲಾಗಿದೆ ಎಂದು ಆಪಾದಿಸಿದ್ದಾರೆ. ಈ ಆರೋಪಗಳ ಬಗ್ಗೆ ಸಂಘದ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಈ ಪ್ರಶ್ನೆಗಳಿಗೆ ಉತ್ತರ ನೀಡದೆ ಸಭೆ ಮುಂದುವರಿಸಲು ಮುಂದಾದಾಗ ಆಡಳಿತ ಮಂಡಳಿಯ ಪರ ಮತ್ತು ವಿರೋಧಿ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ನೂಕಾಟ, ತಳ್ಳಾಟ ಹಾಗೂ ಆರೋಪ–ಪ್ರತ್ಯಾರೋಪಗಳಿಂದ ಗದ್ದಲ ಉಂಟಾಯಿತು. ಗೊಂದಲದ ನಡುವೆಯೇ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಕಳೆದ ಎರಡು–ಮೂರು ವರ್ಷಗಳಿಂದಲೂ ವಾರ್ಷಿಕ ಸಭೆಗಳು ಇದೇ ರೀತಿಯ ಗೊಂದಲದಿಂದ ಮುಕ್ತಾಯಗೊಳ್ಳುತ್ತಿವೆ ಎಂದು ಸಭೆಯಲ್ಲಿದ್ದವರು ತಿಳಿಸಿದರು.

In English: Chikkaballapura District Milk Union (CHIMUL) director Bank Muniyappa demanded a minimum of Rs 40 per litre for milk producers hit by drought and rising production costs, at the Appegowdanahalli Milk Producers Cooperative Society’s 2025-26 AGM, and called for farmers to join a mass protest at Bengaluru’s Freedom Park on September 22 over milk pricing. The society posted a net profit of Rs 8,44,407.96 for the year. CHIMUL is losing about Rs 35 crore annually for lack of its own packing unit and is setting up an Rs 80 crore facility to fix this, officials said, also promising support for a new dairy building at Appegowdanahalli. However, the meeting was again disrupted: a director alleged he hadn’t been invited and demanded clarity on whether it was this year’s or a postponed prior-year meeting, and separately alleged — without an official response yet from the management — that the society secretary, Appajigowda, had not been doing his duties or maintaining records despite drawing a salary for a year. The dispute escalated into shouting, pushing, and confusion, and the meeting was wound up amid the chaos — a pattern attendees said has repeated for the past two-three years.

ಜಿಲ್ಲೆಯ ಇನ್ನೊಂದು ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆಯ ಬಗ್ಗೆ ಗುಣಮಟ್ಟದ ಹಾಲು ಪೂರೈಸಿದರೆ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿ ಸಾಧ್ಯ ಎಂಬ ವರದಿಯನ್ನೂ ಓದಿ.

For Daily Updates WhatsApp ‘HI’ to 7406303366

error: Content is protected !!
Exit mobile version