Sidlaghatta, chikkaballapur : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರವು ತನ್ನ ಅಧಿಕಾರ ಮತ್ತು ಬೊಕ್ಕಸವನ್ನು ದುರುಪಯೋಗಪಡಿಸಿಕೊಂಡು ಗೆದ್ದಿದ್ದು, ಇದು ಪ್ರಜಾಪ್ರಭುತ್ವ ಗೆಲುವಲ್ಲ, ಆಡಳಿತದ ದುರುಪಯೋಗದ ಗೆಲುವು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದ್ದಾರೆ.
ಭಾನುವಾರ ನಗರದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯ “ವೋಟ್ ಚೋರ್ ಗದ್ದಿ ಚೋಡ್” ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಿಹಾರದಲ್ಲಿ 1.25 ಕೋಟಿ ಕುಟುಂಬಗಳ ಖಾತೆಗಳಿಗೆ ತಲಾ ₹10,000 ಜಮಾ ಮಾಡಿದದ್ದು ಚುನಾವಣೆಗೋಸ್ಕರ ಮಾಡಿರುವ ಸ್ಪಷ್ಟವಾದ ಕ್ರಮ ಎಂದು ಹೇಳಿದರು.
“ಚುನಾವಣೆ ಹತ್ತಿರ ಬಂದಾಗ ಹಣ ಸುರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನ. ಇದನ್ನು ‘ಗೆಲುವು’ ಎಂದು ಹೇಳುವುದು ತಪ್ಪು” ಎಂದು ಮುನಿಯಪ್ಪ ತೀವ್ರ ಟೀಕಿಸಿದರು.
ದೇಶದಾದ್ಯಂತ ಕಾಂಗ್ರೆಸ್ ಪರ ಜನರ ಅಭಿಪ್ರಾಯ ಹೆಚ್ಚಾಗಿದ್ದು, ಬీజేపಿ ಮತಗಳ್ಳತನದಿಂದ ಅಧಿಕಾರಕ್ಕೆ ಬರುತ್ತಿದೆ. ಇದರ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯವನ್ನು ಕಾಂಗ್ರೆಸ್ ಕೈಗೊಂಡಿದೆ ಎಂದರು.
“ಶಿಡ್ಲಘಟ್ಟ ಕಾಂಗ್ರೆಸ್‌ನ ಭದ್ರಕೋಟೆ”

ಶಿಡ್ಲಘಟ್ಟ ಕ್ಷೇತ್ರದಲ್ಲಿ ಮಾಜಿ ಸಚಿವ ವಿ. ಮುನಿಯಪ್ಪ ಅವರು ಕಾಂಗ್ರೆಸ್ ಅನ್ನು ಬಲಪಡಿಸಿದ್ದಾರೆ. “ನೀವೆಲ್ಲರೂ ಅವರ ಬೆಂಬಲಿಗರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲಬೇಕು” ಎಂದು ಮುನಿಯಪ್ಪ ಕಾರ್ಯಕರ್ತರನ್ನು ಮನವಿ ಮಾಡಿದರು.
ರಾಜೀವ್ ಗೌಡರ ಕಾರ್ಯವನ್ನು ಶ್ಲಾಘಿಸಿದ ಅವರು, “ಶಾಸಕರು ಸರ್ಕಾರದ ಹಣದಲ್ಲಿ ಅಭಿವೃದ್ಧಿ ಮಾಡುತ್ತಾರೆ. ಆದರೆ ರಾಜೀವ್ ಗೌಡರು ತಮ್ಮ ಸ್ವಂತ ಹಣದಲ್ಲಿ ಆಂಬ್ಯುಲೆನ್ಸ್, ಸಮುದಾಯ ಭವನ, ರಸ್ತೆಗಳು ಸೇರಿದಂತೆ ಅನೇಕ ಸೇವೆ ಮಾಡಿದ್ದಾರೆ. ಇದು ವಿರಳ” ಎಂದರು.
ಕಳೆದ ಚುನಾವಣೆಯಲ್ಲಿನ ಸಣ್ಣ ಗೊಂದಲ ಮರುಕಳಿಸಬಾರದು. ಮುಂದಿನ ಬಾರಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಲೇಬೇಕು,” ಎಂದು ಕರೆ ನೀಡಿದರು.
“1.5 ಲಕ್ಷ ಸಹಿ ಮಾಡಿದರೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ”
ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಮಾತನಾಡಿ,
“ನಾನು ಗೆಲ್ಲಲಿ ಸೋಲಲಿ, ನಿಮ್ಮ ಮನೆ ಮಗನಾಗಿ ನಿಮ್ಮೊಂದಿಗೇ ಇರುತ್ತೇನೆ. ಅಧಿಕಾರದ ಆಸೆ ನನಗಿಲ್ಲ. ಆದರೆ ಕಾರ್ಯಕರ್ತರಿಗೆ ನ್ಯಾಯ ಮತ್ತು ಗೌರವ ಸಿಗಬೇಕು ಎಂಬುದು ನನ್ನ ಆಸೆ” ಎಂದು ಹೇಳಿದರು.
ಬಂಗಾರಪೇಟೆಯಲ್ಲಿ 1.25 ಲಕ್ಷ ಸಹಿಗಳು ಸಂಗ್ರಹವಾದಂತೆ, ಶಿಡ್ಲಘಟ್ಟದಲ್ಲಿ 1.5 ಲಕ್ಷ ಸಹಿ ಮಾಡಿದರೆ ರಾಹುಲ್ ಗಾಂಧಿಯನ್ನು ಭೇಟಿಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಉಸ್ತುವಾರಿ ಉದಯ್ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಕೃಷ್ಣಂರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.