Home News ಪಕ್ಷದ ಅಡಿಯಲ್ಲೇ ಚುನಾವಣೆ, ಕಾರ್ಯಕ್ರಮ, ನಿಯಮ ಉಲ್ಲಂಘಿಸಿದರೆ ಕ್ರಮ : ಅಭಿಷೇಕ್ ದತ್ ಎಚ್ಚರಿಕೆ

ಪಕ್ಷದ ಅಡಿಯಲ್ಲೇ ಚುನಾವಣೆ, ಕಾರ್ಯಕ್ರಮ, ನಿಯಮ ಉಲ್ಲಂಘಿಸಿದರೆ ಕ್ರಮ : ಅಭಿಷೇಕ್ ದತ್ ಎಚ್ಚರಿಕೆ

0
Sidlaghatta Congress Abhishek Dutt pre election Meeting

Sidlaghatta : ಶಿಡ್ಲಘಟ್ಟದಲ್ಲಿ ನಡೆದ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ, ಕ್ಷೇತ್ರಕ್ಕೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸಿ, ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಮಾತನಾಡಿದ ಅಭಿಷೇಕ್ ದತ್, “ಭಾರತದಲ್ಲಿ ಜನತಂತ್ರದ ಆತ್ಮವೇ – ಸ್ವತಂತ್ರ ಹಾಗೂ ನ್ಯಾಯಸಮ್ಮತ ಚುನಾವಣೆ. ಆದರೆ ಬಿಜೆಪಿಯು ಮತಗಳ್ಳತನದ ಮೂಲಕ ಅಧಿಕಾರ ಹಿಡಿಯುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಮತದಾರರು ಇದಕ್ಕೆ ಸೂಕ್ತ ಪಾಠ ಕಲಿಸುವ ಸಮಯ ದೂರದಲ್ಲಿಲ್ಲ,” ಎಂದು ಟೀಕಿಸಿದರು.

ಸಹಿ ಸಂಗ್ರಹ ಅಭಿಯಾನವನ್ನು ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಒಗ್ಗಟ್ಟಿನಿಂದ ಯಶಸ್ವಿಗೊಳಿಸಿರುವುದನ್ನು ಅವರು ಶ್ಲಾಘಿಸಿದರು. “ಇದೇ ಉತ್ಸಾಹ ಮುಂದಿನ ಎಲ್ಲ ಚುನಾವಣೆಗಳಲ್ಲಿ ಮುಂದುವರಿದರೆ, ಆಗ್ನೇಯ ಪದವೀಧರ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಖಚಿತ,” ಎಂದು ಹೇಳಿದರು.

ಪಕ್ಷ ಸಂಘಟನೆಯಲ್ಲಿ ಉತ್ತಮ ಪಾತ್ರವಹಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ಮತ್ತು ಮತ್ತೋರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರೆಡ್ಡಿ ಅವರನ್ನು ವೇದಿಕೆಯಲ್ಲಿ ಅಭಿನಂದಿಸಿ ಶಾಲು ಹೊದಿಸಲಾಯಿತು.

“ದೇಶದಲ್ಲಿ ಕಾಂಗ್ರೆಸ್ ಮರುಸ್ಥಾಪನೆ ಅನಿವಾರ್ಯ. ನಮ್ಮ ತತ್ವಗಳು, ಸಾಧನೆಗಳು, ಜನಪರ ಕಾರ್ಯಕ್ರಮಗಳನ್ನು ಒಬ್ಬೊಬ್ಬ ಮತದಾರಿಗೆ ತಲುಪಿಸುವ ಜವಾಬ್ದಾರಿ ನಿಮ್ಮದು,” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸಭೆಯಲ್ಲಿ ಉದ್ವಿಗ್ನ ಕ್ಷಣ – ಇಬ್ಬರು ನಾಯಕ ಬೆಂಬಲಿಗರ ನಡುವೆ ಮಾತಿನ ಚಕಮಕಿ

ಅಭಿನಂದನಾ ಕಾರ್ಯಕ್ರಮದ ವೇಳೆ, ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರ ಬೆಂಬಲಿಗರ ನಡುವೆ ಜೈಕಾರ ಘೋಷಣೆ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಸಂಭವಿಸಿತು. ಸ್ವಲ್ಪ ಸಮಯ ನೂಕಾಟ–ತಳ್ಳಾಟ ಕೂಡ ನಡೆದಿದ್ದು, ಸಭೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿಸಿ ಸ್ಪರ್ಧಿಸಿದ್ದ ಪುಟ್ಟು ಆಂಜಿನಪ್ಪ ಅವರ ಹಾಜರಾತಿಯ ಕುರಿತು ಕೆಲವು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಗೊಂದಲ ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಮಧ್ಯಪ್ರವೇಶಿಸಿ ಕೆಲವು ಕಾರ್ಯಕರ್ತರನ್ನು ಸ್ಥಳದಿಂದ ಹೊರ ಕಳುಹಿಸಿದರು. ನಂತರ ಸಭೆಯು ಪುನಃ ಮುಂದುವರಿಯಿತು.

ಶಿಸ್ತು ಕುರಿತಾಗಿ ಅಭಿಷೇಕ್ ದತ್ ಎಚ್ಚರಿಕೆ


“ವೋಟ್ ಚೋರ್ ಗದ್ದಿ ಚೋಡ್ ಅಭಿಯಾನವನ್ನು ಯಾರೇ ನಡೆಸುತ್ತಿರಲಿ – ಅದು ಪಕ್ಷದ ನಿಯಮದಂತೆ, ಬ್ಲಾಕ್ ಕಾಂಗ್ರೆಸ್ ಮತ್ತು ಮುಂಚೂಣಿ ಘಟಕಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಯಬೇಕು. ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸುವುದು ಶಿಸ್ತುಭಂಗ. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಅನಿವಾರ್ಯ.” ಎಂದು ಸಭೆಯ ಬಳಿಕ ಇಬ್ಬರು ನಾಯಕರೊಂದಿಗೆ ಮಾತನಾಡಿದ ಅಭಿಷೇಕ್ ದತ್ ಸ್ಪಷ್ಟಪಡಿಸಿದರು

ಅಭಿಯಾನ, ಕಾರ್ಯಕ್ರಮ, ಹೋರಾಟಗಳು ಎಲ್ಲವೂ ಪಕ್ಷದ ಶಿಸ್ತು ಮತ್ತು ವ್ಯವಸ್ಥೆಯ ಒಳಗೆ ಸಾಗಬೇಕು ಎಂದು ಅವರು ಪುನರುಚ್ಚರಿಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೇಶವರೆಡ್ಡಿ, ಕೆಪಿಸಿಸಿ ಕೋ–ಆರ್ಡಿನೇಟರ್ ರಾಜೀವ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಅಧ್ಯಕ್ಷ ಕೃಷ್ಣಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎ. ನಾಗರಾಜ್, ಕೆ.ಗುಡಿಯಪ್ಪ, ಬಿ.ವಿ.ಮುನೇಗೌಡ, ಪುಟ್ಟು ಆಂಜಿನಪ್ಪ, ಅಫ್ಸರ್ ಪಾಷ, ವೆಂಕಟೇಶ್, ನಿರಂಜನ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.


For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version