Home News ರೇಷ್ಮೆ ಗೂಡು, ನೂಲು ಉತ್ಪಾದನೆಯಲ್ಲಿ ನಾವು ಮೊದಲ ಸ್ಥಾನ ಪಡೆಯುವ ಎಲ್ಲ ಅವಕಾಶಗಳಿವೆ

ರೇಷ್ಮೆ ಗೂಡು, ನೂಲು ಉತ್ಪಾದನೆಯಲ್ಲಿ ನಾವು ಮೊದಲ ಸ್ಥಾನ ಪಡೆಯುವ ಎಲ್ಲ ಅವಕಾಶಗಳಿವೆ

0
Silk Farmers reelers Workshop

Sidlaghatta : ರೇಷ್ಮೆ ಉತ್ಪಾದನೆಯಲ್ಲಿ ಇಡೀ ದೇಶದಲ್ಲಿ ನಾವು ದ್ವಿತೀಯ ಸ್ಥಾನದಲ್ಲಿದ್ದು ಮೊದಲ ಸ್ಥಾನಕ್ಕೆ ಬರುವ ಎಲ್ಲ ಅವಕಾಶಗಳು, ತಾಂತ್ರಿಕತೆ ನಮ್ಮಲ್ಲಿದೆ. ಆದರೆ ನಾವು ನೀವು ಎಲ್ಲರೂ ಸೇರಿ ಮನಸ್ಸು ಮಾಡಬೇಕಿದೆ, ಶ್ರದ್ಧೆವಹಿಸಿ ಶ್ರಮಿಸಬೇಕಿದೆ ಎಂದು ವಿಜಯಪುರದ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಮುನಿಶಾಮಿರೆಡ್ಡಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಹಾಗೂ ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಸಹಾಯಕ ನಿರ್ದೇಶಕ ಕಚೇರಿ ಆಶ್ರಯದಲ್ಲಿ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ರೇಷ್ಮೆ ಸಾಕಣೆಯಲ್ಲಿ ತಾಂತ್ರಿಕತೆ ಬಲವರ್ಧನೆಗಾಗಿ ರೈತರಿಂದಲೆ ರೈತರಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ರೈತ ಪರ ಯೋಜನೆಗಳು, ಉತ್ತಮ ಗುಣಮಟ್ಟದ ತಳಿಯ ರೇಷ್ಮೆ ಹುಳು, ಮೊಟ್ಟೆ, ಹಿಪ್ಪುನೇರಳೆ ಸೊಪ್ಪು ಎಲ್ಲವೂ ಇದ್ದು ಉತ್ತಮ ಗುಣಮಟ್ಟದ ರೇಷ್ಮೆ ಗೂಡು, ನೂಲು ಉತ್ಪಾದಿಸಿ ನಾವು ಭಾರತದಲ್ಲಿಯೆ ಮೊದಲ ಸ್ಥಾನ ಪಡೆಯುವ ಎಲ್ಲ ಅವಕಾಶಗಳು ಇದ್ದು ಸದುಪಯೋಗ ಪಡಿಸಿಕೊಳ್ಳೋಣ ಎಂದರು.

ರೈತರು ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ನಡೆಸಿ. ಅಗತ್ಯವಾದಷ್ಟು ಮಾತ್ರ ಗೊಬ್ಬರ, ರಾಸಾಯನಿಕಗಳನ್ನು ಮಾತ್ರ ಇದರಿಂದ ಬಳಸಬಹುದಾಗಿದ್ದು ಇದರಿಂದ ಹಣವೂ ಉಳಿಯಲಿದೆ. ಅನಗತ್ಯ ರಾಸಾಯನಿಕಗಳ ಬಳಕೆ ತಪ್ಪಿ ಭೂಮಿಯ ಫಲವತ್ತತೆ ಕೂಡ ಉಳಿದುಕೊಳ್ಳಲಿದೆ ಎಂದು ಹೇಳಿದರು.

ಭೂಮಿಯ ಗುಣಮಟ್ಟ ಕಾಪಾಡಿಕೊಂಡು ಉತ್ತಮ ಹಿಪ್ಪುನೇರಳೆ ಬೆಳೆಯುವುದರಿಂದ ಉತ್ತಮ ನೂಲು ಕೂಡ ಸಿಗಲಿದೆ. ಇದಕ್ಕೆ ನಮ್ಮಿಂದ ಎಲ್ಲ ರೀತಿಯ ನೆರವು ಸಿಗಲಿದೆ ಎಂದು ತಿಳಿಸಿದರು.

ಹಿಪ್ಪುನೇರಳೆ ಸೊಪ್ಪು ಕಟಾವು ಮಾಡುವ ಯಂತ್ರ ಬೇಕೆಂದು ಸಾಕಷ್ಟು ರೈತರು ವರ್ಷಗಳಿಂದಲೂ ಬೇಡಿಕೆ ಇಟ್ಟಿದ್ದಾರೆ. ನಾವು ಕೂಡ ಸಾಕಷ್ಟು ಶ್ರಮಿಸುತ್ತಿದ್ದೇವೆ, ಅನೇಕ ಕಂಪನಿಗಳು ಕೂಡ ಶ್ರಮಿಸುತ್ತಿವೆ. ರೈತರ ತೋಟದಲ್ಲಿ ಹಿಪ್ಪುನೇರಳೆ ಸೊಪ್ಪಿನ ಬುಡಗಳು ಒಂದೇ ಅಂತರ ಮತ್ತು ಎತ್ತರಕ್ಕೆ ಇಲ್ಲದಿರುವುದು ಹಿಪ್ಪುನೇರಳೆ ಕಟಾವು ಯಂತ್ರ ಆವಿಷ್ಕರಿಸುವುದು ಕಷ್ಟವಾಗುತ್ತದೆ. ಆದರೂ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದರು.

ರೇಷ್ಮೆ ಹುಳು ಸಾಕಣೆಯ ಲದ್ದಿ ಸೊಪ್ಪು ಸೇರಿ ತೆಂಗಿನ ಪಟ್ಟೆ, ಒಣ ಕಡ್ಡಿಗಳನ್ನು ಪುಡಿ ಪುಡಿ ಮಾಡುವ ಯಂತ್ರ 2 ಲಕ್ಷ ರೂಪಾಯಿಗಳಿಗೆ ಸಿಗಲಿದ್ದು ನಾಲ್ಕೈದು ಮಂದಿ ರೈತರು ಸೇರಿ ಯಂತ್ರ ಖರೀದಿಸಿದರೆ ಅನುಕೂಲ ಆಗುತ್ತದೆ ಎಂದರಲ್ಲದೆ ದ್ವಿತಳಿ ರೇಷ್ಮೆ ಹುಳು ಸಾಕಣೆಯಲ್ಲಿ ನೂತನ ತಾಂತ್ರಿಕತೆ ಬಗ್ಗೆ ವಿಜ್ಞಾನಿ ಮುನಿಶಾಮಿರೆಡ್ಡಿ ಅವರು ರೈತರಿಗೆ ವಿವರಿಸಿದರು.

ಕೋಲಾರ ಮಡಿವಾಳ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ.ಪರಮೇಶ್ವರ್ ನಾಯಕ್ ಅವರು, ಹಿಪ್ಪುನೇರಳೆ, ರೇಷ್ಮೆ ಹುಳುಗಳಿಗೆ ತಗಲುವ ರೋಗಗಳು, ಕೀಟಬಾಧೆ ಮತ್ತು ಸಮಗ್ರ ನಿರ್ವಹಣೆ ಬಗ್ಗೆ ರೈತರಿಗೆ ವಿವರಿಸಿದರು.

ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ಮಾತನಾಡಿ, ರೈತರು ರೇಷ್ಮೆ ಗೂಡನ್ನು ಮಾರುಕಟ್ಟೆಯಲ್ಲೇ ಮಾರಾಟ ಮಾಡಿ. ಪಾರದರ್ಶನ ಹಣಕಾಸಿನ ವಹಿವಾಟು ಮತ್ತು ಗುಣಮಟ್ಟಕ್ಕೆ ತಕ್ಕ ಬೆಲೆ ಸಿಗುತ್ತದೆ. 200 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣವಾಗಲಿದ್ದು ರೈತರು, ರೀಲರುಗಳಿಗೆ ಇನ್ನೂ ಹೆಚ್ಚಿನ ಸವಲತ್ತುಗಳು ಸಿಗಲಿವೆ ಎಂದರು.

ಪ್ರಗತಿಪರ ರೈತರಾದ ಸುನಿಲ್, ಪ್ರೇಮಕುಮಾರ್ ಅವರು ತಾವು ರೇಷ್ಮೆ ಕೃಷಿಯಲ್ಲಿ ತೆಗೆದುಕೊಳ್ಳುತ್ತಿರುವ ತಾಂತ್ರಿಕತೆಗಳ ಬಗ್ಗೆ ವಿವರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ನಟರಾಜ್, ನವೀನ್, ಸೂಧಾಬಸವರಾಜ್, ಶ್ಯಾಮಲ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಜಯದೇವಪ್ಪ ಗುಗ್ಗರಿ, ಎಂ.ಸಿ.ಭಾರತಿ, ಹರೀಶ್‌ಗೌಡ, ವರಲಕ್ಷ್ಮಿ, ಸಿಬ್ಬಂದಿ, ರೈತರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version