
Sidlaghatta : ನಗರದ ಸಿದ್ದಾರ್ಥ ನಗರದ ರೇಷ್ಮೆ ನೂಲು ಬಿಚ್ಚಾಣಿಕೆ (ರೀಲಿಂಗ್) ಘಟಕಗಳಿಗೆ ಹಾಗೂ ಎ.ಆರ್.ಎಂ ಘಟಕಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನವೀನ್ ಭಟ್ ಭೇಟಿ ನೀಡಿ, ಸ್ಥಳೀಯ ರೈತರು ಹಾಗೂ ರೀಲರ್ ಗಳ ಸಮಸ್ಯೆಗಳನ್ನು ವಿಚಾರಿಸಿ, ಅವರ ಕಾರ್ಯವೈಖರಿಯನ್ನು ವೀಕ್ಷಿಸಿದರು.
ರೇಷ್ಮೆ ನೂಲು ತಯಾರಿಕೆ, ಟ್ವಿಸ್ಟಿಂಗ್ ಮತ್ತು ಗುಣಮಟ್ಟ ಪರೀಕ್ಷೆ, ರೇಷ್ಮೆ ನೂಲು ಬಿಚ್ಚಾಣಿಕೆ ರೀತಿ, ಗೂಡಿನಲ್ಲಿರುವ ಹುಳು ನಿರ್ಜೀವಗೊಳಿಸುವುದರಿಂದ ಆರಂಭಿಸಿ ರೇಷ್ಮೆ ದಾರವನ್ನು ಮಾರಾಟ ಮಾಡುವವರೆಗೆ ಹಲವಾರು ಸಂಸ್ಕರಣಾ ವಿಧಾನಗಳನ್ನು ಒಳಗೊಂಡಿರುವುದರ ಬಗ್ಗೆ ಮಾಹಿತಿ ಪಡೆದರು. ಸಾಂಪ್ರದಾಯಿಕ ನೂಲು ಬಿಚ್ಚಾಣಿಕೆಯಲ್ಲಿ ಸಂಸ್ಕರಣಾ ವಿಧಾನಗಳು ಅನುಕ್ರಮವಾಗಿ, ಗೂಡು ಉಬ್ಬೆಕೊಡುವುದು, ಗೂಡು ವಿಂಗಡಣೆ, ಏಕಪಾತ್ರೆಯಲ್ಲಿ ಗೂಡು ಬೇಯಿಸುವುದು, ನೂಲು ಬಿಚ್ಚಾಣಿಕೆ ಹಾಗೂ ಮರು ಸುತ್ತಾಣಿಕೆಯ ಬಗ್ಗೆ ಮಾಹಿತಿ ಪಡೆದರು.
ಅದೇ ರೀತಿಯಾಗಿ ಪ್ರಸ್ತುತ ನೂಲು ಬಿಚ್ಚಾಣಿಕೆ ತಾಂತ್ರಿಕತೆ ಸಂಸ್ಕರಣಗಳಾದ ಗೂಡು ಶೇಖರಣೆ, ಗೂಡು ವಿಂಗಡಣೆ, ಗೂಡು ಬೇಯಿಸುವುದು, ರೇಷ್ಮೆ ನೂಲು ಬಿಚ್ಚಾಣಿಕೆ, ರೀಲ್ ಪರ್ಮಿಯೇಶನ್, ಮರು ಬಿಚ್ಚಾಣಿಕೆ, ರೀಲ್ ತೂಕದ ಮಾಹಿತಿ ಪಡೆದರು. ನಂತರ ಎಸ್.ಎಲ್.ಎನ್ ಸಿಲ್ಕ್ ಕೈಗಾರಿಕಾ ಕೇಂದ್ರ, ಎಲ್ಲಾ ವಿಧದ ಬಗೆಬಗೆಯ ಟ್ವಿಸ್ಟಿಂಗ್ ಸಿಲ್ಕ್ ಮತ್ತು ನಲ್ಲಿಮರದಹಳ್ಳಿಯ ಎ.ಆರ್.ಎಂ ಸಿಲ್ಕ್ ಘಟಕದಕ್ಕೆ ಭೇಟಿ ನೀಡಿ, ಆಧುನಿಕ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಮಾಹಿತಿ ಪಡೆದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ.ಆರ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್.ಎನ್., ನರೇಗಾ ಐಇಸಿ ಸಂಯೋಜಕ ಲೋಕೇಶ, ರೇಷ್ಮೆ ಇಲಾಖೆ ಸಿಬ್ಬಂದಿ ಹಾಜರಿದ್ದರು.