Home News ರಸಗೊಬ್ಬರ, ಬಿತ್ತನೆ ಬೀಜ ಸಮರ್ಪಕ ಲಭ್ಯ; ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಸೂಚನೆ

ರಸಗೊಬ್ಬರ, ಬಿತ್ತನೆ ಬೀಜ ಸಮರ್ಪಕ ಲಭ್ಯ; ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಸೂಚನೆ

0
Sidlaghatta Fertilizer Seed Availability Crop Insurance

Sidlaghatta : ಮುಂಗಾರು ಮಳೆ ಇನ್ನೂ ಸಮರ್ಪಕವಾಗಿ ಆರಂಭವಾಗದ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ರೈತರು ಮಳೆಯ ನಿರೀಕ್ಷೆಯಲ್ಲೇ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ನಡೆಸಿದ್ದಾರೆ. ಈ ನಡುವೆ, 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದ್ದು, ರೈತರು ಯಾವುದೇ ಆತಂಕವಿಲ್ಲದೆ ಇಲಾಖೆಯ ಮಾರ್ಗದರ್ಶನದಂತೆ ಕೃಷಿ ಕಾರ್ಯ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ತಿಳಿಸಿದರು.

ಹೊಸ ತಳಿಗಳ ಬೆಳೆ ವಿಸ್ತೀರ್ಣ ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆಯಿಂದ ರೈತರಿಗೆ ಉಚಿತವಾಗಿ ತೊಗರಿ, ಉದ್ದು ಹಾಗೂ ಅವರೆ ಬೆಳೆಗಳ ಹೊಸ ತಳಿಗಳ ಬೀಜಗಳ ಕಿರುಚೀಲಗಳನ್ನು ವಿತರಿಸಿ ಅವರು ಮಾತನಾಡಿದರು.

ಮುಂಗಾರು ಹಂಗಾಮಿಗೆ ಅಗತ್ಯವಿರುವ ಯೂರಿಯಾ, ಡಿ.ಎ.ಪಿ., ಎಂ.ಒ.ಪಿ. ಹಾಗೂ ವಿವಿಧ ಕಾಂಪ್ಲೆಕ್ಸ್ (ಸಂಯುಕ್ತ) ರಸಗೊಬ್ಬರಗಳನ್ನು ಕೃಷಿ ಸೇವಾ ಕೇಂದ್ರಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ಹಂಗಾಮಿನ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಸರಬರಾಜು ಹಾಗೂ ವಿತರಣೆ ನಿರಂತರವಾಗಿ ನಡೆಯುತ್ತಿದೆ. ಅಗತ್ಯ ಪ್ರಮಾಣದ ರಸಗೊಬ್ಬರ ಲಭ್ಯವಿರುವುದರಿಂದ ರೈತರು ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡದೆ, ಇಲಾಖೆ ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಬಳಸಬೇಕು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ವಿವಿಧ ಬೆಳೆಗಳಿಗೆ ಅಗತ್ಯವಿರುವ ಪ್ರಮಾಣೀಕೃತ ಬಿತ್ತನೆ ಬೀಜಗಳೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. ಇಲಾಖೆ ಹಾಗೂ ಅಧಿಕೃತ ಮಾರಾಟ ಕೇಂದ್ರಗಳ ಮೂಲಕ ಗುಣಮಟ್ಟದ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ರೈತರು ಖಾಸಗಿ ಮೂಲಗಳಿಂದ ಬೀಜ ಖರೀದಿಸುವ ಬದಲು ಇಲಾಖೆ ಶಿಫಾರಸು ಮಾಡಿದ ಅಧಿಕೃತ ಮಾರಾಟ ಕೇಂದ್ರಗಳಿಂದಲೇ ಪ್ರಮಾಣೀಕೃತ ಬೀಜಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಾಲಿನ ಮುಂಗಾರು ಹಂಗಾಮಿಗೆ ವಿವಿಧ ಬೆಳೆಗಳ ವಿಸ್ತೀರ್ಣ ಗುರಿ ನಿಗದಿಪಡಿಸಲಾಗಿದ್ದು, ಮಳೆ ವಿಳಂಬವಾಗಿರುವ ಕಾರಣ ಬಿತ್ತನೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆರಂಭವಾಗಿಲ್ಲ. ಮಳೆಯ ಸ್ಥಿತಿಗತಿಗಳನ್ನು ಗಮನಿಸಿ, ಸ್ಥಳೀಯ ಹವಾಮಾನ ಹಾಗೂ ಮಣ್ಣಿನ ಗುಣಲಕ್ಷಣಗಳಿಗೆ ಅನುಗುಣವಾಗಿ ಇಲಾಖೆ ಶಿಫಾರಸು ಮಾಡಿದ ಬೆಳೆಗಳನ್ನಷ್ಟೇ ಬೆಳೆಯುವಂತೆ ರೈತರಿಗೆ ಸೂಚಿಸಿದರು.

ಡಿ.ಎ.ಪಿ. ರಸಗೊಬ್ಬರದ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ರೈತರು 20:20:0:13, 15:15:15, 12:32:16 ಸೇರಿದಂತೆ ವಿವಿಧ ಕಾಂಪ್ಲೆಕ್ಸ್ (ಸಂಯುಕ್ತ) ರಸಗೊಬ್ಬರಗಳನ್ನು ಮಣ್ಣಿನ ಪರೀಕ್ಷಾ ವರದಿಗೆ ಅನುಗುಣವಾಗಿ ಬಳಸಬೇಕು. ಇದರಿಂದ ಬೆಳೆಗಳಿಗೆ ಸಮತೋಲನ ಪೋಷಕಾಂಶ ದೊರೆಯುವುದರ ಜೊತೆಗೆ ಉತ್ಪಾದನಾ ವೆಚ್ಚವೂ ನಿಯಂತ್ರಣದಲ್ಲಿರುತ್ತದೆ ಎಂದು ವಿವರಿಸಿದರು.

ಮಣ್ಣಿನ ಪರೀಕ್ಷೆ ಆಧರಿಸಿ ರಸಗೊಬ್ಬರ ಬಳಕೆ ಮಾಡಬೇಕು. ಜೈವಿಕ ಗೊಬ್ಬರ, ಸಾವಯವ ಗೊಬ್ಬರ ಹಾಗೂ ಸೂಕ್ಷ್ಮ ಪೋಷಕಾಂಶಗಳ ಬಳಕೆಗೆ ಆದ್ಯತೆ ನೀಡಬೇಕು. ಮಳೆಯ ಪರಿಸ್ಥಿತಿಯನ್ನು ಗಮನಿಸಿ ಬಿತ್ತನೆ ಕೈಗೊಳ್ಳುವುದರ ಜೊತೆಗೆ ಕೀಟ ಹಾಗೂ ರೋಗ ನಿರ್ವಹಣೆ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಬರದ ಛಾಯೆ: ಬೆಳೆ ವಿಮೆ ಮಾಡಿಸಿಕೊಳ್ಳಲು ಮನವಿ

ತಾಲ್ಲೂಕಿನಲ್ಲಿ ಇನ್ನೂ ಸಮರ್ಪಕ ಮಳೆಯಾಗದ ಕಾರಣ ಬರದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಬೆಳೆ ನಷ್ಟದಿಂದ ಆರ್ಥಿಕ ರಕ್ಷಣೆ ಪಡೆಯಲು ಎಲ್ಲ ರೈತರೂ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ವಿಮೆ ನೋಂದಣಿ ಪೂರ್ಣಗೊಳಿಸಿ, ಅಗತ್ಯ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿ ವ್ಯಾಪ್ತಿಯ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳು ಅಥವಾ ಶಿಡ್ಲಘಟ್ಟ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ಸರ್ಕಾರದ ವಿವಿಧ ಯೋಜನೆಗಳು, ಬಿತ್ತನೆ ಬೀಜಗಳ ವಿತರಣೆ, ರಸಗೊಬ್ಬರ ಲಭ್ಯತೆ ಹಾಗೂ ಬೆಳೆ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

In English: Sidlaghatta’s Agriculture Department has stocked adequate fertilizers (urea, DAP, MOP, complex fertilizers) and certified seeds for the 2026-27 kharif season, Assistant Director Ravi said, urging farmers to buy only recommended quantities and prefer soil-test-based complex fertilizers over DAP. With monsoon rains delayed, he also appealed to all farmers to mandatorily enrol in crop insurance to safeguard against possible crop loss.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version