ಪೂರ್ಣ ಪುಟ · Open full page

ಡಿಸಿಸಿ ಬ್ಯಾಂಕ್ ಸುಸ್ತಿ, ದಿವಾಳಿಯಲ್ಲ: ರೈತರಿಗೆ ₹5 ಲಕ್ಷದವರೆಗೆ ಸಾಲ, ತಿಂಗಳೊಳಗೆ ಫೋನ್‌ಪೇ

DCC Bank president and MLA Kothur Manjunath addressing a meeting of cooperative society presidents and customers

Sidlaghatta : ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಸುಸ್ತಿಯಾಗಿರುವುದು ನಿಜ, ಆದರೆ ದಿವಾಳಿಯಾಗಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ಶಿಡ್ಲಘಟ್ಟ ಶಾಖೆಗೆ ಮೊದಲ ಬಾರಿಗೆ ಬುಧವಾರ ಭೇಟಿ ನೀಡಿದ ಅವರು, ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಹಕರ ಸಭೆಯಲ್ಲಿ ಮಾತನಾಡಿದರು. ಬ್ಯಾಂಕ್ ರೈತರು ಮತ್ತು ಮಹಿಳೆಯರ ಪರವಾಗಿದ್ದು, ರೈತರು, ಮಹಿಳೆಯರು ಹಾಗೂ ಸಾರ್ವಜನಿಕರು ಎಲ್ಲ ಹಣಕಾಸಿನ ವ್ಯವಹಾರಗಳನ್ನು ಡಿಸಿಸಿ ಬ್ಯಾಂಕ್ ಮೂಲಕವೇ ನಡೆಸಬೇಕು ಎಂದು ಮನವಿ ಮಾಡಿದರು.

ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಬ್ಯಾಂಕಿನ ಸಮಸ್ಯೆಗಳನ್ನು ಸರಿಪಡಿಸಿ ಎಲ್ಲ ಹಣಕಾಸಿನ ಚಟುವಟಿಕೆಗಳನ್ನು ಮತ್ತೆ ಸಕ್ರಿಯಗೊಳಿಸಲಾಗುವುದು ಎಂದು ತಿಳಿಸಿದರು. ರೈತರಿಗೆ ಕೃಷಿ ಸಾಲ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಲು ಬ್ಯಾಂಕ್ ಸಿದ್ಧವಿದ್ದು, ಗ್ರಾಹಕರು ವಿಶ್ವಾಸವಿಟ್ಟು ಖಾತೆ ತೆರೆಯಬೇಕು ಎಂದರು.

ರೈತರು, ಮಹಿಳೆಯರಿಗೆ ಸಾಲ ಸೌಲಭ್ಯ

ಕೃಷಿ ಚಟುವಟಿಕೆಗಳಿಗೆ ರೈತರಿಗೆ ₹5 ಲಕ್ಷದವರೆಗೆ ಸಾಲ ನೀಡಲಾಗುವುದು. ಪ್ರತಿ ಸಹಕಾರ ಬ್ಯಾಂಕ್ ವ್ಯಾಪ್ತಿಯಲ್ಲಿ ಐದು ಉತ್ತಮ ಮಹಿಳಾ ಸ್ವಸಹಾಯ ಸಂಘಗಳನ್ನು ಗುರುತಿಸಿ, ಸಾಲಕ್ಕೆ ಬೇಕಾದ ಕಡತಗಳನ್ನು ಸಿದ್ಧಪಡಿಸಿಕೊಟ್ಟರೆ ಸಾಲ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ಠೇವಣಿ ಮತ್ತು ಫೋನ್‌ಪೇ ಸೌಲಭ್ಯ

ಇತರ ಬ್ಯಾಂಕುಗಳು ಠೇವಣಿಗೆ ನೀಡುವ ಬಡ್ಡಿದರವನ್ನೇ ಡಿಸಿಸಿ ಬ್ಯಾಂಕ್ ಕೂಡ ನೀಡಲಿದೆ. ಇದನ್ನು ಗ್ರಾಹಕರಿಗೆ ಮನವರಿಕೆ ಮಾಡಿ ಹೆಚ್ಚು ಠೇವಣಿ ಸಂಗ್ರಹಿಸಲು ನಿರ್ದೇಶಕರು ಮತ್ತು ಸಿಬ್ಬಂದಿ ಶ್ರಮಿಸಬೇಕು ಎಂದರು. ಆರ್‌ಬಿಐ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಒಂದು ತಿಂಗಳೊಳಗೆ ಗ್ರಾಹಕರಿಗೆ ಫೋನ್‌ಪೇ ಮತ್ತು ಆರ್‌ಟಿಜಿಎಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬ್ಯಾಂಕ್ ನಿರ್ದೇಶಕ ನಾಗರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು, ರೇಷ್ಮೆ ಕೃಷಿಕರು ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಪಕ್ಷಭೇದವಿಲ್ಲದೆ ಎಲ್ಲ ಅರ್ಹರಿಗೂ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಲಾಗುವುದು ಎಂದು ಕೊತ್ತೂರು ಮಂಜುನಾಥ್ ಹೇಳಿದರು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಬ್ಯಾಂಕ್ ನಿರ್ದೇಶಕರಾದ ಮೋಹನ್‌ ರೆಡ್ಡಿ, ಮಂಜುನಾಥ್, ಹನುಮೇಗೌಡ, ಪ್ರಭಾಕರ್, ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆನಂದ್ ಹಾಗೂ ತಾಲ್ಲೂಕಿನ ಎಲ್ಲ ಎಸ್‌ಎಫ್‌ಸಿಎಸ್ ಬ್ಯಾಂಕುಗಳ ಸಿಇಒಗಳು ಉಪಸ್ಥಿತರಿದ್ದರು.

ನೋಟಿಸ್ ಮತ್ತು ಹಣ ಪಡೆದ ಆರೋಪ

ರೈತ ಸಂಘದ ಪದಾಧಿಕಾರಿಗಳು ಕೊತ್ತೂರು ಮಂಜುನಾಥ್ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು. ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಇದ್ದು, ಸರ್ಕಾರ ಬರ ಘೋಷಿಸಿದೆ. ರೈತರಿಂದ ಸಾಲ ವಸೂಲಿ ಮಾಡಬಾರದೆಂಬ ಆದೇಶವಿದ್ದರೂ ಡಿಸಿಸಿ ಬ್ಯಾಂಕಿನ ಕೆಲವು ಶಾಖೆಗಳಲ್ಲಿ ಮರುಪಾವತಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಅವರು ದೂರಿದರು. ಸಾಲ ನವೀಕರಣದ ವೇಳೆ ಕೆಲವು ಶಾಖೆಗಳ ವ್ಯವಸ್ಥಾಪಕರು ₹2 ಸಾವಿರದಿಂದ ₹3 ಸಾವಿರದವರೆಗೆ ಹಣ ಪಡೆಯುತ್ತಿದ್ದಾರೆ ಎಂದೂ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೊತ್ತೂರು ಮಂಜುನಾಥ್, ರೈತರಿಂದ ಸಾಲ ವಸೂಲಿ ಮಾಡದಂತೆ ಈಗಾಗಲೇ ಸೂಚಿಸಲಾಗಿದೆ; ಯಾರಾದರೂ ನೋಟಿಸ್ ನೀಡಿದ್ದರೆ ತಮ್ಮ ಗಮನಕ್ಕೆ ತರಬೇಕು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಸಾಲ ನವೀಕರಣದ ವೇಳೆ ಹಣ ಪಡೆಯಲು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ, ರೈತರೂ ಇಂತಹ ಹಣ ನೀಡಬಾರದು, ಹಣ ಪಡೆದಿರುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಬಂಧಿತ ಸುದ್ದಿ: 73ನೇ ಸಹಕಾರ ಸಪ್ತಾಹ: ಠೇವಣಿ, ವ್ಯವಹಾರ ಸಹಕಾರ ಬ್ಯಾಂಕ್‌ನಲ್ಲೇ ಇರಲಿ ಎಂದು ರೈತರಿಗೆ ಮನವಿ | ಬರದ ನಡುವೆಯೂ ₹5.80 ಕೋಟಿ KCC ಸಾಲ ಮರುಪಾವತಿ: ರೇಷ್ಮೆ ಬೆಳೆಗಾರರ ಸಂಘಕ್ಕೆ ₹6 ಕೋಟಿ ಹೊಸ ಸಾಲ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Exit mobile version