ಪೂರ್ಣ ಪುಟ · Open full page

ಕೋಳಿ ಸಾಕಣೆಗೆ ಕೆ.ಜಿ.ಗೆ ₹20 ನೀಡಿ: ನ.25ಕ್ಕೆ ವಿಧಾನಸೌಧ ಚಲೋ ಎಚ್ಚರಿಕೆ

Members of the taluk poultry farmers association sitting in a circle at a preparatory meeting in the temple premises, Sidlaghatta, ahead of the planned Vidhana Soudha Chalo on 25 November

Sidlaghatta : ಕೋಳಿ ಸಾಕಣೆ ರೈತರಿಗೆ ಪ್ರತಿ ಕೆ.ಜಿ.ಗೆ ₹20 ಸಾಕಣೆ ವೆಚ್ಚದ ಬಾಬ್ತು ನೀಡಬೇಕು ಎಂದು ಆಗ್ರಹಿಸಿ ನವೆಂಬರ್ 25ರಂದು ವಿಧಾನಸೌಧ ಚಲೋ ನಡೆಸಲಾಗುವುದು ಎಂದು ರಾಜ್ಯ ಕೋಳಿ ಸಾಕಣೆದಾರರ ಸಂಘದ ಉಪಾಧ್ಯಕ್ಷ ಮಳವಮಾಚನಹಳ್ಳಿ ಮುನಿಗೌಡ ತಿಳಿಸಿದರು.

ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ತಾಲ್ಲೂಕು ಕೋಳಿ ಸಾಕಣೆದಾರರ ಸಂಘದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

2021ರಲ್ಲಿ ಕಂಪನಿಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಫಾರಂ ಕೋಳಿ ಸಾಕಣೆದಾರರಿಗೆ ಪ್ರತಿ ಕೆ.ಜಿ.ಗೆ ₹6.20 ನೀಡಬೇಕು ಮತ್ತು ವರ್ಷಕ್ಕೆ 50 ಪೈಸೆ ಹೆಚ್ಚಿಸಬೇಕಿತ್ತು. ಆದರೆ ಕಂಪನಿಗಳು ಇಲ್ಲಿಯವರೆಗೆ ₹6.20 ಮಾತ್ರ ಕೊಡುತ್ತಿದ್ದು, ವಾರ್ಷಿಕ ಹೆಚ್ಚಳ ಮಾಡಿಲ್ಲ ಎಂದು ಅವರು ಆರೋಪಿಸಿದರು.

2025ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಂಪನಿಗಳು ಮತ್ತು ಕೋಳಿ ಸಾಕಣೆದಾರರ ಸಭೆ ನಡೆದಿತ್ತು; ಅಲ್ಲಿ ಪ್ರತಿ ಕೆ.ಜಿ.ಗೆ ₹10 ನೀಡುವಂತೆ ಸೂಚಿಸಲಾಗಿತ್ತು. ಆ ನಿರ್ಧಾರವೂ ಇನ್ನೂ ಜಾರಿಗೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಿದ್ದು ಕೋಳಿ ಸಾಕಣೆಯ ನಿರ್ವಹಣಾ ವೆಚ್ಚವೂ ಏರಿದೆ, ಆದರೆ ರೈತರಿಗೆ ನೀಡುವ ದರ ಮಾತ್ರ ಹೆಚ್ಚಿಲ್ಲ. ಹೀಗಾಗಿ ಹೆಚ್ಚುತ್ತಿರುವ ವೆಚ್ಚವನ್ನು ಪರಿಗಣಿಸಿ ಪ್ರತಿ ಕೆ.ಜಿ.ಗೆ ₹20 ನೀಡಬೇಕು ಎಂದು ಅವರು ಒತ್ತಾಯಿಸಿದರು.

ಬೇಡಿಕೆ ಈಡೇರದಿದ್ದರೆ ನವೆಂಬರ್ 25ರಂದು ರಾಜ್ಯದ ಎಲ್ಲ ಜಿಲ್ಲೆಗಳ ಸುಮಾರು 15 ಸಾವಿರ ಕೋಳಿ ಸಾಕಣೆದಾರರು ವಿಧಾನಸೌಧ ಚಲೋದಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಸಾಕಣೆದಾರರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಸಂಘದ ಗೌರವಾಧ್ಯಕ್ಷ ಡಿ. ನಾರಾಯಣಸ್ವಾಮಿ, ಉಪಾಧ್ಯಕ್ಷ ಎ. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಬಿ. ವೆಂಕಟೇಶ್, ಕಾರ್ಯಾಧ್ಯಕ್ಷ ಹುಣಸೇನಹಳ್ಳಿ ಮುನಿಯಪ್ಪ, ಕಾರ್ಯದರ್ಶಿ ಶಿವಾಜಿ, ಖಜಾಂಚಿ ಕೋಟಹಳ್ಳಿ ಶ್ರೀನಿವಾಸ್, ನಿರ್ದೇಶಕರಾದ ಎಂ.ಸಿ. ಜಗದೀಶ್, ಎಂ.ಎಲ್. ಮುನಿಗೌಡ, ಉಮಾಶಂಕರ್, ಬಿ.ಎಸ್. ಮುನಿಗೌಡ, ಮಂಜುನಾಥ್, ಶ್ರೀನಿವಾಸ್, ಬೈರೇಗೌಡ, ವಿಜಯ್ ಕುಮಾರ್, ಆಂಜಿನಪ್ಪ, ಬೋದಗೂರು ನಾಗೇಶ್ ಕುಮಾರ್, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

FAQ

ಕೋಳಿ ಸಾಕಣೆದಾರರ ಬೇಡಿಕೆ ಏನು?
ಪ್ರತಿ ಕೆ.ಜಿ. ಕೋಳಿ ಸಾಕಣೆಗೆ ಸಾಕಣೆ ವೆಚ್ಚದ ಬಾಬ್ತಾಗಿ ₹20 ನೀಡಬೇಕು ಎಂದು ಸಂಘ ಒತ್ತಾಯಿಸಿದೆ. 2021ರ ಒಪ್ಪಂದದ ₹6.20 ಮಾತ್ರ ಈಗಲೂ ಸಿಗುತ್ತಿದೆ ಎಂದು ಅದು ಆರೋಪಿಸಿದೆ.

ವಿಧಾನಸೌಧ ಚಲೋ ಯಾವಾಗ?
ನವೆಂಬರ್ 25ರಂದು. ಬೇಡಿಕೆ ಈಡೇರದಿದ್ದರೆ ರಾಜ್ಯದ ಎಲ್ಲ ಜಿಲ್ಲೆಗಳ ಸುಮಾರು 15 ಸಾವಿರ ಕೋಳಿ ಸಾಕಣೆದಾರರು ಭಾಗವಹಿಸಲಿದ್ದಾರೆ ಎಂದು ಸಂಘ ತಿಳಿಸಿದೆ.

ಸಂಬಂಧಿತ ಸುದ್ದಿ: ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಜೂನ್ 5ರಂದು ವಿಧಾನಸೌಧ ಚಲೋ | ಪಶು ಆಹಾರ ಘಟಕಕ್ಕೆ ಹಾಲು ಉತ್ಪಾದಕರ ಮುತ್ತಿಗೆ: ತನಿಖೆಯ ಭರವಸೆ ನೀಡಿ ಕ್ಷಮೆ ಕೋರಿದ KMF MD

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Exit mobile version