
Sidlaghatta : ತಾಲ್ಲೂಕಿನ ಜಂಗಮಕೋಟೆಯ ಕೆಐಎಡಿಬಿಗೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಜೂನ್ 5 ರಂದು ಬೆಂಗಳೂರು ವಿಧಾನಸೌಧ ಚಲೋ ಬೃಹತ್ ಬೈಕ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 78 ದಿನಗಳಿಂದಲೂ ಜಿಲ್ಲಾಡಳಿತ ಭವನದ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ರಾಜ್ಯ ಸರಕಾರ, ಜಿಲ್ಲಾಡಳಿತದಿಂದ ಸೂಕ್ತ ಸ್ಪಂಧನೆ ಸಿಗದ ಕಾರಣ ಜೂನ್ 5 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲು ಸರ್ವ ಸಿದ್ದತೆಗಳು ನಡೆದಿವೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ರೈತರು, ರೈತ ಸಂಘಟನೆಗಳು ಹಾಗೂ ರೈತ ಪರ ಅನೇಕ ಸಂಘಟನೆಗಳು ಬೈಕ್ ರ‍್ಯಾಲಿಗೆ ಬೆಂಬಲ ವ್ಯಕ್ತಪಡಿಸಿ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಈಗಾಗಲೆ ಹಳ್ಳಿ ಹಳ್ಳಿ ಸುತ್ತಿ ಕರಪತ್ರ ಹಂಚಿ ವ್ಯಾಪಕ ಪ್ರಚಾರ ನಡೆಸಲಾಗಿದೆ. ಉತ್ತಮ ಪ್ರತಿಕ್ರಿಯೆ ಮತ್ತು ಬೆಂಬಲ ವ್ಯಕ್ತವಾಗಿದ್ದು ಸುಮಾರು ೩ ಸಾವಿರ ಬೈಕ್‌ಗಳಲ್ಲಿ ರೈತರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಿಂದ ಬೆಂಗಳೂರು ವಿಧಾನಸೌಧಕ್ಕೆ ಬೈಕ್ ರ‍್ಯಾಲಿಯಲ್ಲಿ ಹೆಚ್ಚಿನ ರೈತರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ನಾವು ಯಾರು ಕೂಡ ಕೈಗಾರಿಕೆಗಳ ವಿರೋಧಿಗಳಲ್ಲ. ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿ ಆಗಲಿದೆ, ಇದರಿಂದ ಆರ್ಥಿಕ ಬೆಳವಣಿಗೆ ಆಗಲಿದೆ ಸತ್ಯ. ಆದರೆ ಫಲವತ್ತಾದ ಕೃಷಿ ಭೂಮಿ ಹೊರತುಪಡಿಸಿ ಇತರೆ ಭಾಗದಲ್ಲಿ ಕೆಐಎಡಿಬಿ ಆಗಲಿ. ಜಿಲ್ಲಾಡಳಿತ, ತಾಲೂಕು ಆಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಕೂತ ಚರ್ಚಿಸಿ ಅಂತಿಮವಾಗಿ ಕೈಗಾರಿಕೆ ಪ್ರದೇಶದ ಅಭಿವೃದ್ದಿ ಜಾಗ ಗುರ್ತಿಸಲಿ ನಮ್ಮದೇನು ತಕರಾರು ಇಲ್ಲ ಎಂದರು.
ರೈತ ಸಂಘದ ಮುಖಂಡ ದೊಣ್ಣಹಳ್ಳಿ ರಾಮಣ್ಣ ಮಾತನಾಡಿ, ಕೈಐಎಡಿಬಿ ವಿಚಾರದಲ್ಲಿ ಜೆಡಿಎಸ್ ಪಕ್ಷವು ದ್ವಂಧ್ವ ನೀತಿ ಅನುಸರಿಸುತ್ತಿದೆ. ಬಿಡದಿಯಲ್ಲಿ ಕೈಗಾರಿಕೆಗಳಿಗೆ ಭೂಮಿ ಸ್ವಾಧೀನವನ್ನು ವಿರೋಧಿಸುತ್ತಿದ್ದಾರೆ. ಆದರೆ ಅವರದ್ದೇ ಪಕ್ಷದ ಕ್ಷೇತ್ರದ ಶಾಸಕರು ಶಿಡ್ಲಘಟ್ಟದಲ್ಲಿ ಕೆಐಎಡಿಬಿಗೆ ಜಮೀನು ಸ್ವಾಧೀನವನ್ನು ಸ್ವಾಗತಿಸುತ್ತಿದ್ದಾರೆ ಎಂದರು.
ಜೆಡಿಎಸ್‌ನ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಕೆಐಎಡಿಬಿ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ತಮ್ಮದೇ ಪಕ್ಷದ ಶಾಸಕರಿಗೂ ಅದೇ ನೀತಿ ನಿಯಮಗಳು ಅನ್ವಯವಾಗುವುದಾಗಿಯೂ ಹೇಳಬೇಕು ಎಂದು ಆಗ್ರಹಿಸಿದರು.
ಕೆಐಎಡಿಬಿ ಭೂಮಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹೀರೆಬಲ್ಲ ಕೃಷ್ಣಪ್ಪ, ನಡಿಪಿನಾಯನಹಳ್ಳಿ ಅಜಿತ್ ಕುಮಾರ್, ಅಶ್ವತ್ಥನಾರಾಯಣಗೌಡ, ರಘು ಇನ್ನಿತರರು ಹಾಜರಿದ್ದರು.