
Sidlaghatta : ಪ್ರಜಾವಾಣಿ ವಾರ್ತೆ
ಶಿಡ್ಲಘಟ್ಟ : ಜಂಗಮಕೋಟೆ ಭಾಗದ ಕೆಐಎಡಿಬಿಗೆ ನಮ್ಮ ಜಮೀನು ಕೊಡಲು ನಾವು ಸಿದ್ದರಿದ್ದು ಕಳೆದ 72 ದಿನಗಳಿಂದಲೂ ಜಿಲ್ಲಾಡಳಿತ ಭವನದ ಆವರಣದಲ್ಲಿ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದರೂ ರಾಜ್ಯ ಸರಕಾರ, ಜಿಲ್ಲಾಧಿಕಾರಿಗಳು ನಮಗೆ ಯಾವುದೆ ರೀತಿಯಲ್ಲೂ ಸ್ಪಂಧಿಸುತ್ತಿಲ್ಲ ಎಂದು ಸಾಮೂಹಿಕ ನಾಯಕತ್ವ ರೈತ ಸಂಘದ ಮುಖಂಡ ಮುನಿಕೆಂಪಣ್ಣ ದೂರಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೆ ಅಲ್ಲಿನ ಫಲವತ್ತಾದ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ. ಇನ್ನುಳಿದಂತೆ ಇರುವ ಭಂಜರು ಭೂಮಿ, ಕೃಷಿ ನಡೆಸಲು ಅಷ್ಟಾಗಿ ಯೋಗ್ಯವಲ್ಲದ ಭೂಮಿ, ಸರಕಾರಿ ಜಮೀನನ್ನು ಕೂಡಲೆ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 72 ದಿನಗಳಿಂದಲೂ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದರೂ ನಮಗೆ ಸರಕಾರ, ಜಿಲ್ಲಾಡಳಿತದಿಂದ ಸೂಕ್ತ ಸ್ಪಂಧನೆ ಸಿಗುತ್ತಿಲ್ಲ. ಅದಕ್ಕಾಗಿ ಜೂನ್ 4 ರಂದು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಿಂದ ಅನಿರ್ಧಿಷ್ಟ ಧರಣಿ ನಡೆಯುತ್ತಿರುವ ಡಿಸಿ ಕಚೇರಿವರೆಗೂ ಪಂಜಿನ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದರು.
೫ನೇ ತಾರೀಕಿನಂದು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದು ನಮ್ಮ ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದರು.
ನಮಗೆ ಕೃಷಿ ಮಾಡಲು ಆಗದಂತಹ ಭಂಜರು ಭೂಮಿ ಇದೆ. ಅದರಿಂದ ನಾವು ಜೀವನ ನಡೆಸಲು ಸಾಧ್ಯವಿಲ್ಲದಂತಾಗಿದೆ. ಹಾಗಾಗಿ ನಾವು ಕೈಗಾರಿಕೆ ಪ್ರದೇಶ ಅಭಿವೃದ್ದಿ ಮಂಡಳಿಗೆ ನೀಡಲು ಸಿದ್ದ. ಇದರಿಂದ ನಮ್ಮ ಮಕ್ಕಳಿಗೆ ಉದ್ಯೋಗವಾದರೂ ಸಿಗಲಿದೆ. ಬದುಕನ್ನು ಕಟ್ಟಿಕೊಳ್ಳುತ್ತೇವೆ ಎಂದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುಬ್ರಮಣಿ ಮಾತನಾಡಿ, ನಾವು ನಮ್ಮ ಪಾಲಿನ ಭಂಜರು ಭೂಮಿಯನ್ನು ಕೆಐಎಡಿಬಿಗೆ ಬಿಟ್ಟುಕೊಡಲು ಸಿದ್ದರಿದ್ದೇವೆ. ನಾವು ಫಲವತ್ತಾದ ಭೂಮಿಯನ್ನು ಬಿಡಿ ಎಂದು ಯಾರಿಗೂ ಬಲವಂತ ಮಾಡುತ್ತಿಲ್ಲ ಎಂದರು.
ಇನ್ನು ನಾವು ನಮ್ಮ ಭೂಮಿಯನ್ನು ಕೆಐಎಡಿಬಿಗೆ ನೀಡಲು ಸಿದ್ದವಿದ್ದು 72 ದಿನಗಳಿಂದಲೂ ನಾವುಗಳೇ 50, 100 ರೂ, ಹಣವನ್ನು ಕೈ ಯಿಂದ ಹಾಕಿಕೊಂಡು ಪೆಂಡಾಲ್, ಚೇರು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ. ಯಾವ ಸಮಾಜ ಸೇವಕರಿಂದಲೂ ದೇಣಿಗೆ ಪಡೆದಿಲ್ಲ. ಸುಖಾ ಸುಮ್ಮನೆ ನಮ್ಮ ಮೇಲೆ ವಿನಾಕಾರಣ ಆರೋಪ ಮಾಡಬಾರದು ಎಂದು ವಿರೋಧಿಗಳಿಗೆ ಹೇಳಿದರು.
ಈ ಸಂದರ್ಬದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ, ಕಾರ್ಯಾದ್ಯಕ್ಷ ಹರೀಶ್, ಮುಖಂಡರಾದ ಆಂಜಿನಪ್ಪ, ಪ್ರಭುಗೌಡ, ನಾಗರಾಜ್ ಮತ್ತಿತರರು ಹಾಜರಿದ್ದರು.