
Sidlaghatta : ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ಗುರುವಾರ ಇದ್ದಕ್ಕಿದ್ದಂತೆ ಭೇಟಿ ನೀಡಿ, ಮಾರುಕಟ್ಟೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಘಟನೆ ವ್ಯಾಪಾರಿಗಳು ಮತ್ತು ಅಧಿಕಾರಿಗಳಲ್ಲಿ ಕುತೂಹಲ ಮೂಡಿಸಿತು.
ಮಾರುಕಟ್ಟೆಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ನ್ಯಾಯಾಧೀಶರು, ಹರಾಜು ಪ್ರಕ್ರಿಯೆ, ಗೂಡುಗಳ ಖರೀದಿ-ಮಾರಾಟ ವ್ಯವಸ್ಥೆ, ರೈತರಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯ ಹಾಗೂ ಕಾರ್ಮಿಕರ ಕೆಲಸದ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದರು. ಪ್ರತಿನಿತ್ಯ ನಡೆಯುವ ವಹಿವಾಟಿನ ಸ್ವರೂಪದ ಬಗ್ಗೆಯೂ ಚರ್ಚಿಸಿದ ಅವರು, ದೂರದ ಗ್ರಾಮಗಳಿಂದ ಬರುವ ರೇಷ್ಮೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹರಾಜು ನಡೆಸುವ ವಿಧಾನ, ಗೂಡುಗಳ ಗುಣಮಟ್ಟದ ಆಧಾರದ ಮೇಲೆ ಬೆಲೆ ನಿಗದಿಪಡಿಸುವ ಪ್ರಕ್ರಿಯೆ, ತೂಕದ ವ್ಯವಸ್ಥೆ ಹಾಗೂ ರೈತರಿಗೆ ಹಣ ಪಾವತಿಯಾಗುವ ಕ್ರಮಗಳ ಕುರಿತು ನ್ಯಾಯಾಧೀಶರು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು.
ಮಾರುಕಟ್ಟೆಯಲ್ಲಿ ದುಡಿಯುತ್ತಿರುವ ಕಾರ್ಮಿಕರೊಂದಿಗೂ ನೇರ ಸಂವಾದ ನಡೆಸಿದ ಅವರು, ಕಾರ್ಮಿಕರ ಕೆಲಸದ ಪರಿಸ್ಥಿತಿ, ವೇತನ, ಸುರಕ್ಷತಾ ಕ್ರಮಗಳು ಹಾಗೂ ಕಾನೂನುಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಪ್ರತಿ ಉದ್ಯೋಗದಾತನ ಹೊಣೆಗಾರಿಕೆಯಾಗಿದ್ದು, ಕನಿಷ್ಠ ವೇತನ ಸೇರಿದಂತೆ ಸರ್ಕಾರದ ನಿಯಮಾನುಸಾರ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ಸ್ಪಷ್ಟಪಡಿಸಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ಕಾರ್ಮಿಕ ಇಲಾಖೆ ಅಧಿಕಾರಿ ಮಂಜುಳ, ರೇಷ್ಮೆ ಇಲಾಖೆ ಅಧಿಕಾರಿಗಳು, ಮಾರುಕಟ್ಟೆ ಸಿಬ್ಬಂದಿ, ವ್ಯಾಪಾರಿಗಳು ಹಾಗೂ ಕಾರ್ಮಿಕರು ಹಾಜರಿದ್ದರು.
In English: Senior Civil Judge Mohammed Roshan Shah made a surprise visit to Sidlaghatta’s government silk cocoon market, inspecting the auction process, weighing system, farmer payments, and working conditions of labourers. He directed officials to ensure adequate facilities for farmers from distant villages and stressed that employers must provide all statutory benefits, including minimum wages, to workers.