
Sidlaghatta : ನಗರದ ವಾಸವಿ ರಸ್ತೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಬಿ.ಎನ್.ರವಿಕುಮಾರ್ ಸೋಮವಾರ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ದೂರದೃಷ್ಟಿಯ ಯೋಜನೆಯಡಿ ವಾಸವಿ ರಸ್ತೆಯ ಅಭಿವೃದ್ಧಿ ಏಳು ಹಂತಗಳಲ್ಲಿ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಒಳಚರಂಡಿ ಕಾಮಗಾರಿ, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಅಮೃತ್ 2 ಯೋಜನೆಯ ಪೈಪ್‌ಲೈನ್ ಕಾಮಗಾರಿ, ಮಳೆನೀರು ಸರಾಗವಾಗಿ ಹರಿಯಲು ಹ್ಯೂಮ್ ಪೈಪ್ ಹಾಗೂ ಚೇಂಬರ್‌ಗಳ ನಿರ್ಮಾಣ, ನಗರಸಭೆಯ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ, ವಿದ್ಯುತ್ ಕಂಬಗಳ ಸ್ಥಳಾಂತರ, ರಸ್ತೆಗೆ ಹೊಂದಿಕೊಂಡ ಏಳು ಕಿರುರಸ್ತೆಗಳ ಆರಂಭದಲ್ಲಿ ಡ್ರೈನ್ ನಿರ್ಮಾಣ ಹಾಗೂ ಎಲ್ಲ ಕಾಮಗಾರಿ ಮುಗಿದ ಬಳಿಕ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಈ ಹಂತಗಳಲ್ಲಿ ಸೇರಿವೆ.
“ಬಹುತೇಕ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ, ಸಾರ್ವಜನಿಕರಿಗೆ ತೊಂದರೆಯಾಗದಿರಲೆಂದು ಕಾಮಗಾರಿಯನ್ನು ತ್ವರಿತವಾಗಿ ಮಾಡಿಸಲಾಗುತ್ತಿದೆ. ಈಗಾಗಲೇ 60ರಷ್ಟು ಕಾಮಗಾರಿ ಮುಗಿದಿದೆ. ಇನ್ನು ಎರಡು ವಾರಗಳಲ್ಲಿ ರಸ್ತೆ ಕೆಲಸ ಆರಂಭವಾಗಲಿದ್ದು, ಇದು ಇನ್ನು 50 ವರ್ಷ ಶಾಶ್ವತವಾಗಿ ಉಳಿಯುವ ಕಾಮಗಾರಿ. ಸಾರ್ವಜನಿಕರು ಸಹಕರಿಸಬೇಕು” ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ನಗರಸಭೆ ಪೌರಾಯುಕ್ತೆ ಅಮೃತ, ಸ್ಥಳೀಯರಾದ ಬಿ.ಆರ್.ಅನಂತಕೃಷ್ಣ, ಎಸ್.ಎಸ್.ನಾಗರಾಜ್, ರಾಜೇಶ್, ರಮೇಶ್, ನಂದಕಿಶನ್, ವೈಶಾಕ್, ಜೆ.ವಿ.ಸುರೇಶ್, ಲಕ್ಷ್ಮೀನಾರಾಯಣ್, ಆರ್.ಎ.ಉಮೇಶ್, ಬೆಸ್ಕಾಂ ಎಂಜಿನಿಯರುಗಳು ಹಾಜರಿದ್ದರು.
In English: Sidlaghatta MLA B.N. Ravikumar inspected ongoing Vasavi Road development works, directing officials to speed up completion. The seven-phase project covers underground drainage, Amrit 2.0 drinking water pipelines, storm-water drains, power line relocation, and a final cement-concrete road. About 60% of work is complete, with the road-laying phase to begin in two weeks; the MLA said the road is built to last 50 years and appealed for public cooperation.